s R.S.Venkataraju: July 2006

R.S.Venkataraju

Sunday, July 30, 2006

ಗುಲಗಂಜಿ

ಗುಲಗಂಜಿ
(ಸಣ್ಣ ಕತೆ)
-ಆಕ್ರಮಣವಾದೀತೆಂದು ಸದಾಭೀತನಾಗಿರುವವನಿಗೆ ಪರಾಭವ ತಪ್ಪಿದ್ದಲ್ಲ.
- ನೆಪೋಲಿಯನ್

“ನೀವು ಎನೇ ಹೇಳ್ರಿ ಸಾಹೇಬ್ರ....ಪೂರ್ವಜನ್ಮದ ಸಂಸ್ಕಾರ ಅಂತ ಏನ ನಾವು ಕರೀತೀವಿ, ಅದ ಇದಕ್ಕೆಲ್ಲಾ ಕಾರಣಾ ಅಂತ ನನಗ ಅನಸ್ತದ ನೋಡ್ರಿ.” ಏನೆಲ್ಲಾ ಮಾತಾಡಿದರೂ ಕೊನೆಗೆ ಮೊದಲಿನ ಸಿದ್ದಾಂತಕ್ಕೆ ಜೋತುಬಿದ್ದರು ನಿವೃತ್ತ ತಾಸೀಲ್ದಾರ ಬಾಳಪ್ಪ ಹಣುಮಂತಪ್ಪ ಪಾಟೀಲ.
“ಅದು ಹಾಂಗ ಆಗೂದಿಲ್ಲೋ ಬಾಳೂ. ಅದಕ್ಕ ನಾ ಹೇಳೋದು ನಮ್ಮ ದೇಶದಲ್ಲಿ ‘ಸೈಂಟಿಫಿಕ್ ಜೌಟ್ ಲುಕ್’ ಬೆಳೆಸಿಕೋಬೇಕೂ ಅಂತ... ಅದಕ್ಕೆಲ್ಲಾ ಮುಖ್ಯ ಕಾರಣಾ ಅಂದ್ರ environment ಅರ್ಥಾತ್ ಪರಿಸರ. ಈ ಅಪರಾಧ ಮನೋಭಾವನೆ ಉದ್ಭವಿಸುವುದೇ ನಾವು ನಿಂತ ಪರಿಸರದಿಂದ. ನೆಲೆಗಟ್ಟುಟೊಳ್ಳಾದಾಗ ಕುಸಿತ ಅನಿವಾರ್ಯ” ಏದುಸಿರು ಬಿಡುತ್ತಾ ವಾದಿಸಿದರು ಡಾ.ಮೋಹನರಾವ್ ರಾಜಾರಾವ್ ಇನಾಂದಾರ್.

ಬಿ.ಹೆಚ್.ಪಾಟೀಲ ಮತ್ತು ಡಾ.ಎಂ.ಆರ್.ಇನಾಂದಾರ್ ಬಾಲ್ಯಸ್ನೇಹಿತರು. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಯಲದಲ್ಲಿ ಅಪರಾಧ ಪರಿಶೋಧನಾ ವಿಜ್ಞಾನಿಯಾಗಿದ್ದು, ಇತ್ತೀಚೆಗೆ ತಾನೇ ನಿವೃತ್ತಿ ಹೊಂದಿ ತವರೂರಾದ ಧಾರವಾಡದಲ್ಲಿ ನೆಲೆಸಿರುವ ಡಾ.ಇನಾಂದಾರ್‌ರಿಗೆ ಅವರದೇ ಆದ ಚರಿಷ್ಮಾ ಇದೆ.
ದಿನಾ ಸಂಜೆ ವಾಯುಸೇವನೆಗೆಂದು ಹೋಗುವ ಸ್ನೇಹಿತರ ಬಾಯಲ್ಲಿ ಅನೇಕ ವಿಷಯಗಳು ಹಿಟ್ಟಾಗಿ ಹೋಗುತ್ತವೆ. ಅಂದಿನ ವಿಷಯ ‘ಭಾರತದಲ್ಲಿ ಹೆಚ್ಚುತ್ತಿರುವ ಕೊಲೆ, ಸುಲಿಗೆ, ದರೋಡೆ, ಅತ್ಯಾಚಾರಗಳಿಗೆ ಕಾರಣಗಳು’. ಡಾ.ಇನಾಂದಾರರ ಪರಿಧಿಯಲ್ಲಿ ಬರುವ ವಿಷಯವಾದ್ದರಿಂದ ಅವರು ತುಂಬಾ ಹುರುಪಿನಿಂದ ತಮ್ಮ ಕೈಕೋಲು ನೆಲಕ್ಕೂರುವುದನ್ನೂ ಮರೆತು ಮಾತಾಡುತ್ತಿದ್ದಾರೆ.

“ ಮತ್ತ ಗೀತಾದೊಳಗ ಕರ್ಮಣ್ಯೇವಾಧಿಕಾ...”
“ ಸ್ಟಾಪ್ ಬಾಳೂ. ನಾನೊಂದಿಷ್ಟು ಪುಸ್ತಕಾ ಕೊಡ್ತೇನಿ ಮೊದಲು ಅವನ್ನ ಓದು” ಎಂದ ಡಾ.ಇನಾಂದಾರ್ ತಮ್ಮ ಭವ್ಯ ಬಂಗಲೆಯ ಮುಂದೆ ನಿಂತು ಕೊಂಚ ಎಡಕ್ಕೆ ಭುಜ ಕುಣಿಸಿ “ಸೊ ಲಾಂಗ್” ಎಂದು ಕಬ್ಬಿಣದ ಗೇಟ್ ತೆರೆದು ಒಳಹೊಕ್ಕರು. ಗ್ರೀನ್ ಲಾನ್‌ನಲ್ಲಿ ಮೊಂಡು ಬಾಲದ ಬಿಳಿ ಡಾಬರ್‌ಮ್ಯಾನ್ ಅವರನ್ನು ಸ್ವಾಗತಿಸಿ, ಯಜಮಾನನ ಆಗಮನವನ್ನು ‘ಬೌ’ ಎಂದು ಅಡಿಗೆಯಾಳಿಗೆ ಸೂಚನೆ ಕೊಟ್ಟಿತು.
ಗ್ರೀನ್ ಲಾನ್‌ನಲ್ಲಿನ ಬೆತ್ತದ ಕುರ್ಚಿಯಲ್ಲಿ ‘ಹುಷ್’ ಎಂದು ಕುಳಿತು ಕೈಯಲ್ಲಿ ಕೋಲನ್ನು ಟೀಪಾಯ್‌ಗಾನಿಸಿ ಆಗಸದಲ್ಲಿ ಮಿಣಿಕ್ ಮಿಣಿಕ್ ಎನ್ನುತ್ತಾ ಒಂದೊಂದೇ ಚುಕ್ಕಿ ಹುಟ್ಟುತ್ತಿದ್ದುದನ್ನು ಗಮನಿಸತೊಡಗುತ್ತಾರೆ ಡಾ.ಇನಾಂದಾರ್.
ಅಷ್ಟು ದೊಡ್ಡ ಆ ಬಂಗಲೆಯಲ್ಲಿ ಜೀವಂತ ಜೀವಿಗಳೆಂದರೆ ಅಡಿಗೆ ಭಟ್ಟ, ಟಾಂ ಅನ್ನೊ ಡಾಬರ್‌ಮ್ಯಾನ್ ನಾಯಿ ಮತ್ತು ಪ್ರಖ್ಯಾತ ಅಪರಾಧ ಪರಿಶೋಧನಾ ವಿಜ್ಞಾನಿ ಡಾ.ಇನಾಂದಾರ್. ಅವರ ಪತ್ನಿ ಸುಶೀಲಾಬಾಯಿ ಒಬ್ಬಳೇ ಮಗಳಾದ ಜೋತ್ಸಾ ಇನಾಂದಾರಳ ಕೊರಗಿನಲ್ಲೇ ಸತ್ತು ನಾಲ್ಕು ವರ್ಷಗಳೇ ಕಳೆದಿವೆ.
ಜೋತ್ಸಾ ಇನಾಂದಾರರ ಏಕಮಾತ್ರ ಪುತ್ರಿ. ಕಾಲೇಜಿನಲ್ಲಿ ಕಲಿಯುತ್ತಿದ್ದಾಗ ಸಹಪಾಠಿ ಮನೋಹರನ ಸಲಿಗೆ ಬೆಳೆಯಿತವಳಿಗೆ, ಪ್ರೀತಿ, ಪ್ರೇಮ, ಕಾಮಗಳ ಸಂಗಮದೊಂದಿಗೆ ಮದುವೆಯ ಮೆಟ್ಟಿಲ ಬಳಿ ಕಾಯುತ್ತ ನಿಂತಿತು ಸ್ನೇಹ. ಕಾರಣ ಮನೋಹರ ಬೇರೆ ಜಾತಿಯವ, ಡಾ.ಇನಾಂದಾರರದೇನೂ ತಕರಾರಿರಲಿಲ್ಲ. ಆದರೆ ಅವರ ಪತ್ನಿ ಸುಶೀಲಾಬಾಯಿ ಬಾಯಿ ಬಾಯಿ ಬಡಕೊಂಡು ರಂಪ ಮಾಡಿದರು. ಜೋತ್ಸಾ ಮತ್ತು ಮನೋಹರರ ಪ್ರೇಮ ಪಕ್ವವಾಗಿ ಮೂರು ತಿಂಗಳ ಹಣ್ಣಾಗಿತ್ತು. ತಾಯಿಯ ಮನಸ್ಸು ನೋಯಿಸಬೇಡವೆಂದು ಡಾ.ಇನಾಂದಾರ್‌ ಹೇಳಿದರೂ ಜೋತ್ಸಾ ಮನೆಬಿಟ್ಟು ಮನೋಹರನ ಜೊತೆ ಹಳಿಯಾಳ ರಸ್ತೆಯಲ್ಲಿದ್ದ ಅವನ ಫಾರಂ ಹೌಸಿನಲ್ಲಿ ಸಂಸಾರ ಹೂಡಿದಳು. ಮುಂದೆ ಈ ಕೊರಗಿನಲ್ಲೇ ಸುಶೀಲಾಬಾಯಿ ಸಾವನ್ನಪ್ಪಿದರು.

ಕಾಲ ಎಲ್ಲವನ್ನೂ ಮರೆಸುತ್ತದೆನ್ನುವ ಅರಿವಿದ್ದ ಡಾ.ಇನಾಂದಾರ್ ಸ್ನೇಹಿತರ ವಶೀಲಿಯಿಂದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದಲ್ಲಿ ಕೆಲಸಕ್ಕೆ ಸೇರಿದರು. ಇತ್ತ ಜೋತ್ಸಾ ಹೆಣ್ಣುಮಗುವಿಗೆ ಜನ್ಮವಿತ್ತು ತಾಯಿಯ ನೆನಪಿಗಾಗಿ ಸುಶೀಲ ಎಂದೇ ನಾಮಕರಣ ಮಾಡಿದಳು.

ಮನೋಹರನಿಗೂ ಬ್ಯಾಂಕಿನಲ್ಲಿ ಕೆಲಸ ಸಿಕ್ಕಿತು.
ಕಾಲಚಕ್ರ ತಿರುಗುತ್ತಲೇ ಇತ್ತು. ನಿವೃತ್ತಿ ಹೊಂದಿದ ಡಾ.ಇನಾಂದಾರ್ ಕ್ಯಾಲಿಫೋರ್ನಿಯಾದಿಂದ ಮರಳಿ ಧಾರವಾಡಕ್ಕೆ ಬಂದು ನೆಲಸಿದರು. ಮೊಮ್ಮಗಳ ಕಣ್ಣು... ನೀಳನಾಸಿಕ ಅವರಿಗೆ ಹೆಂಡತಿಯ ನೆನಪು ತರಿಸುವಂತಿತ್ತು. ಮಾತು ಚೂಟಿತನದಲ್ಲಿ ಜೋತ್ಸಾಳನ್ನು ಮೀರಿಸುತ್ತಿದ್ದಳು ಪುಟ್ಟ ಸುಶೀ.

“ ನನಗ್ಯಾರಿದ್ದಾರೆ? ಈ ಆಸ್ತಿ ಎಲ್ಲಾ ಯಾರಿಗೆ? ಈ ಒಂಟಿ ಜೀವನ ನನಗ ಸಾಕಾಗೇದ. ಇಲ್ಲೇ ಬಂದು ನೆಲಸ್ರಿ” ಎಂದು ಮಗಳನ್ನು ಕೇಳಿದರು ಡಾ.ಇನಾಂದಾರ್, ಆದರೆ ತಾಯಿಯ ಸಾವಿಗೆ ತಾನೇ ಕಾರಣಳೆಂಬ ಪಾಪ ಪ್ರಜ್ಞೆಯಲ್ಲಿ ನರಳುತ್ತಿದ್ದ ಜೋತ್ಸಾ ನಯವಾಗಿ ತಿರಸ್ಕರಿಸಿದಳು.
ಚುಕ್ಕಿಗಳ ಜೊತೆ ನೆನಪಿನಾಗಸದಲ್ಲಿ ವಿಹರಿಸುತ್ತಿದ್ದ ಡಾ.ಇನಾಂದಾರರನ್ನು “ ಸಾಹೇಬ್ರ, ಚಾ” ಎಂದು ವಾಸ್ತವಲೋಕಕ್ಕಿಳಿಸುತ್ತ ಹಬೆ ಏಳುತ್ತಿದ್ದ ಚಹಾದೊಂದಿಗೆ ಅಂದಿನ ಸಂಜೆ ಪತ್ರಿಕೆಯನ್ನು ಟ್ರೇನಲ್ಲಿ ತಂದ ಅಡಿಗೆಯಾಳು ಟೀಪಾಯ್ ಮೇಲಿಟ್ಟ.
ಚಹಾ ಹೀರುತ್ತಾ ಪೇಪರ್ ಕೈಗೆತ್ತಿಕೊಂಡ ಅವರ ಕಣ್ಣಿಗೆ ನಿಂಬೆಹಣ್ಣಿನ ಗಾತ್ರದ ಅಕ್ಷರಗಳ ಹೆಡ್ಡಿಂಗ್ ಹೊತ್ತ ಮೊದಲ ಪುಟದಲ್ಲಿನ ಸುದ್ದಿರಾಚುತ್ತದೆ.
ನಗರದ ಹೊರವಲಯದ ಸಾಧನಕೇರಿ ಬಡಾವಣೆಯ ಒಂಟಿ ಮನೆಯ ಮೇಲೆ ಡಕಾಯಿತನ ದಾಳಿ. ನಗರದ ಖಾಸಗೀ ಕಾರ್ಖಾನೆಯ ನೌಕರನಾದ ಬಸವಂತಪ್ಪ ಈರಪ್ಪ ಉಳ್ಳಾಗಡ್ಡಿ ದಂಪತಿಗಳು ಡಕಾಯಿತರ ಗುಂಡೇಟಿಗೆ ಬಲಿಯಾಗಿದ್ದಾರೆ. ಮನೆಯಲ್ಲಿದ್ದ ಎಲ್ಲಾ ವಸ್ತುಗಳನ್ನು ಲೂಟಿಮಾಡಿ ಶ್ರೀಮತಿ ಉಳ್ಳಾಗಡ್ಡಿಯವರ ಮೇಲೆ ಅತ್ಯಾಚಾರವೆಸಗಿ, ಕೊಂದಿತ್ತಾರೆ. ಈ ಘಟನೆ ಟೌನ್ ಪೋಲೀಸ್ ಠಾಣೆಯ ಇನ್‌ಸ್ಟೆಕ್ಟರ್ ನಾಯಕ ಪರಿಶೋಧನೆ ನಡೆಸುತ್ತಿದ್ದಾರೆ. ವರದಿಯನ್ನು ಓದುತ್ತಿದ್ದ ಹಾಗೇ ಅವರ ಮನಸ್ಸು ಫಾರಂ ಹೌಸಿನ ಒಂಟಿ ಮನೆಯಲ್ಲಿ ವಾಸಿಸುತ್ತಿದ್ದ ಮಗಳ ಕಡೆ ಹೋಯಿತು. ಮಗಳಿಗೆ ಹುಷಾರಾಗಿರಲು ಹೇಳಬೇಕೆಂದು ಯೋಚಿಸಿ ಬಂಗಲೆ ಒಳಗೆ ಹೋಗಿ ಟೆಲಿಪೋನ್ ಡಯಲ್ ಮಾಡಿದರು.

ಅತ್ತಕಡೆ ರಿಸೀವರ್ ಎತ್ತುವ ಸೂಚನೆಗಳೇ ಕಂಡುಬರುತ್ತಿಲ್ಲ. ಜೋತ್ಸಾ ಕೆಲಸದಲ್ಲಿರಬೇಕು ಅಂದುಕೊಂಡರು ಡಾ.ಇನಾಂದಾರ್. ಕೆಲಕ್ಷಣಗಳ ನಂತರ ಸುಶೀ ಫೋನ್ ರಿಸೀವರ್ ಎತ್ತಿದಳು.
“ಹಲೋ ಸುಶೀ ಡಿಯರ್” ಎಂದು ಮಂದಹಾಸದಿಂದ ಮೊಮ್ಮಗಳನ್ನು ಮಾತನಾಡಿಸಿದರು.

“ ಹೊರಗೆ ಮಮ್ಮಿ ಯಾರದೋ ಹತ್ರ ಮಾತಾಡ್ಲಿಕ್ಕೆ ಹತ್ಯಾಳ ಲಗೂ ಕರೀತೀನಿ ಗ್ರಾಂಡ್ ಪ” ತನ್ನ ಮುದ್ದಾದ ಧ್ವನಿಯಲ್ಲಿ ಹೇಳಿದಳು ಸುಶೀ. ನಂತರ ರೀಸಿವರ್ ಪಕ್ಕದಲ್ಲಿಟ್ಟ ಶಬ್ದ.
ಮಗಳು ಬಂದು ಮಾತಾಡುತ್ತಾಳೆಂದು ರಿಸೀವರ್ ಕಿವಿಯ ಹತ್ತಿರವೇ ಇಟ್ಟು ಕಾಯತೊಡಗಿದ ಡಾ.ಇನಾಂದಾರ್‌ಗೆ ಇದ್ದಕ್ಕಿದ್ದ ಹಾಗೆ ರಿಸೀವರ್‌ನಿಂದ ಮತ್ತೊಂದು ಕಂಠ ಕೇಳಿಸಿತು. ಅದು ಅಪರಿಚಿತ ಗಂಡಸಿನ ಕರ್ಕಶ ಧ್ವನಿ....
“ಅಲ್ಲೇ ನಿಂತುಕೋ, ಕೂಗಿದೆ ಅಂದರೆ ನಾನೇನು ಮಾಡತೀನಿ ಅಂತ ಹೇಳ್ಳಿಕ್ಕಾಗೂದಿಲ್ಲಾ.”
ಡಾ.ಇನಾಂದಾರ್‌ “ಊಹಿಸಿದ ಹಾಗೆ ಆಯಿತಲ್ಲ ಇದು,” ಎಂದು ಚಕಿತರಾದರು. ಅಷ್ಟು ವರ್ಷದ ಅಪರಾಧ ಪರಿಶೋಧಕ ಜ್ಞಾನ ಹೆಡೆಬಿಚ್ಚಿ ಕುಣಿಯತೊಡಗಿತು. ಅವರ ಮನಸ್ಸು ಕೆಡುಕಿನ ವಾಸನೆ ಹೀರತೊಡಗಿತು. ಅದೇ ಸಮಯದಲ್ಲಿ ರಿಸೀವರಿಂದ ಮತ್ತೊಂದು ಧ್ವನಿ....!

“ಆ ಹುಡುಗಿ ಚೀರಿಕೊಳ್ಳದ ಹಾಂಗ ನೋಡಿಕೊ... ಏನಾದ್ರೂ ಅತಿ ಶ್ಯಾಣೇತನ ನನ್ನ ಹತ್ತಿರ ತೋರಿಸಿದೆ ಅಂದ್ರ ಇಲ್ಲಿ ನೋಡು, ಈ ರಿವಾಲ್ವರ್ ಈಗಾಗ್ಲೆ ಎರಡು ಕೊಲೆ ಮಾಡೇದ, ಇನ್ನೂ ನಾಲ್ಕು ಗುಂಡು ಬಾಕಿ ಅವ. ಇಬ್ಬರಿಗೇ ನಾಲ್ಕು ಗುಂಡು? ಭಾಳ ಆತು, ಅಲ್ಲ?” ಗಬ್ಬರ್‌ಸಿಂಗ ಶೈಲಿಯ ನಗು.
“ಓ ಗಾಡ್!” ಉದ್ಗಾರತೆಗೆದರು ಡಾ.ಇನಾಂದಾರ್, ರಿಸೀವರ್ ಮೇಲಿದ್ದ ಕೈ ಹಿಡಿತ ಬಿಗಿಯಾಯಿತು, ಕಣ್ಣುಗಳು ಕಿರಿದಾದವು.
ಈಗ ಏನು ಮಾಡಬೇಕು? ಪೋಲೀಸರಿಗೆ ತಿಳಿಸಿದರೆ? ಆದರೆ ಭಾರತದ ಪೋಲೀಸ್ ವ್ಯವಸ್ಥೆ.... ‘ಓ ಷಿಟ್’ ತಕ್ಷಣ ಅವರು ರಕ್ಷಣೆ ನೀಡೋ ಸ್ಥಿತಿಯಲ್ಲಿರುತ್ತಾರೆಯೇ? ಅದೇ ಕ್ಯಾಲಿಫೋರ್ನಿಯಾದಲ್ಲಾಗಿದ್ದರೆ.... ಕ್ಷಣದಲ್ಲಿ ಹಿಡಿಯುತ್ತಿದ್ದರು. ಸಾವು ಬದುಕುಗಳ ನಡುವೆಯೂ ಅಂತಹ ಯೋಚನೆಗಳಿಗೆ ಅವರಿಗೇ ನಾಚಿಕೆ ಎನಿಸುತ್ತಿತ್ತು.

ಊಹೂಂ!ಹೀಗೆ ಯೋಚಿಸುತ್ತಾ ಗಾಬರಿಪಟ್ಟರೆ ಪ್ರಯೋಜನವಿಲ್ಲ. ಈಗ ಮನಸ್ಸಿಗೆ ಬೇಕಾಗಿರುವುದು ಏಕಾಗ್ರತೆ. ಅತ್ತ ಕಡೆ ಅವರು ಏನು ಮಾತಾಡುತ್ತಾರೋ ಹುಷಾರಾಗಿ ಕೇಳಿ ನಂತರ ಏನು ಮಾಡಬೇಕೋ ನಿರ್ಣಯಿಬೇಕು ಎಂದುಕೊಂಡು ಆಲಿಸತೊಡಗಿದರು.
“ನಾವು ಹೇಳಿದ್ಹಂಗ ನಿನ್ನ ಗಂಡನ ಹತ್ರ ಹೋಗಿ ರೊಕ್ಕ ತೊಗೊಂಡು ಬಾ.. ಈ ಹುಡಗಿ ನಮ್ಮ ಹತ್ತಿರಾ ಇರ್ತಾಳ” ಕೇಳಿಬಂತು ಕರ್ಕಶ ಆದೇಶ.
ಈ ಮಾತುಗಳಿಂದ ದುಷ್ಟರ ಪ್ಲಾನೆಲ್ಲಾ ಡಾ.ಇನಾಂದಾರ್‌ಗೆ ಅರ್ಥವಾಗಿ ಹೋಯಿತು. ಅಳಿಯ ಮನೋಹರ್ ಬ್ಯಾಂಕಿನಲ್ಲಿ ಕ್ಯಾಷಿಯರ್, ಜೋತ್ಸಾಳನ್ನು ಬೆದರಿಸಿ ಬ್ಯಾಂಕಿಗೆ ಕಳಿಸಿ ಹಣ ತರಿಸುವ ಯೋಜನೆ! ಅಲ್ಲಿಯವರಿಗೆ ಮೊಮ್ಮಗಳು ಸುಶೀ ಒತ್ತೆಯಾಳು..!
ಅಷ್ಟರಲ್ಲಿ ಹೆಂಗಸಿನ ಮೃದು ಧ್ವನಿ ಕೇಳಿಸಿತು. ರಿಸೀವರನ್ನು ಕಿವಿಯ ಹತ್ತಿರವಿಟ್ಟು ಕೇಳತೊಡಗಿದರು. ಆ ಧ್ವನಿ ಜೋತ್ಸಾಳದೇನಾ? ಅಳು ಧ್ವನಿಯಲ್ಲಿ ಅವಳೇನು ಹೇಳುತ್ತಿದ್ದಾಳೋ ಸರಿಯಾಗಿ ಕೇಳಿಸುತ್ತಿಲ್ಲ. ‘ದಯವಿಟ್ಟು ಮಗಳನ್ನು ಏನೂ ಮಾಡಬೇಡಿ ನಿಮಗೆ ಬೇಕಾಗಿರುವುದು ಹಣ ಅಷ್ಟೇ ತಾನೇ’ ಎಂದು ದೈನ್ಯದಿಂದ ಜೋತ್ಸಾ ಬೇಡುತ್ತಿದ್ದಾಳೆಂದುಕೊಂಡರು ಡಾ.ಇನಾಂದಾರ್.
ಮಗಳ ಪರಿಸ್ಥಿತಿಯಿಂದಾಗಿ ಅವರ ಕಣ್ಣುಗಳು ಮಂಜಾಗತೊಡಗಿದವು. ದು:ಖ ಒತ್ತರಿಸಿ ಬರತೊಡಗಿತು. ಹೇಗಾದರೂ ಮಾಡಿ ಏಕ ಮಾತ್ರ ಕರುಳುಬಳ್ಳಿಯನ್ನು ಅಪಾಯದಿಂದ ಕಾಪಾಡಬೇಕು...
ಅವರ ಮನಸ್ಸು ಮಿಸೈಲ್ ವೇಗದಲ್ಲಿ ಯೋಚಿಸತೊಡಗಿತು. ಹಠಾತ್ತಾಗಿ ಅವರ ನೆನಪಿಗೆ ಬಂದ ವಿಷಯವೆಂದರೆ ಟೆಲಿಪೋನ್! ಪಕ್ಕದಲ್ಲೇ ಇರುವ ಟೆಲಿಪೋನ್‌ನ್ನು ಆ ದುಷ್ಟರು ಗಮನಿಸಿದ ಹಾಗಿಲ್ಲ. ಅದೇ ಟೆಲಿಪೋನ್‌ ಅಪಾಯದಲ್ಲಿರುವ ಮಗಳನ್ನು ರಕ್ಷಿಸುವ ಅವಕಾಶ ಕಲ್ಪಿಸುತ್ತಿರುವ ಏಕಮಾತ್ರ ಕೊಂಡಿ. ಆದರೆ ಡಕಾಯಿತರೇನಾದರೂ ಟೆಲಿಪೋನನ್ನು ಗಮನಿಸಿದರೇ? ಆದರೆ ಹಾಗಾಗುವುದು ಬೇಡವೆಂದು ಮನಸ್ಸಿನಲ್ಲೇ ದೇವರನ್ನು ಪ್ರಾರ್ಥಿಸಿದರು.
ಇನ್ನು ತಡಮಾಡುವುದರಲ್ಲಿ ಅರ್ಥವಿಲ್ಲವೆಂದು ತಿಳಿದು, ಟೆಲಿಪೋನ್‌ ಮೌತ್ ಪೀಸನ್ನು ಬಲವಾಗಿ ಕೈಯಿಂದಾ ಮುಚ್ಚುತ್ತಾ ಅಡಿಗೆಯಾಳನ್ನು ಕೂಗಿದರು. ಅವರ ಧ್ವನಿ ಅವರಿಗೇ ವಿಚಿತ್ರವಾಗಿ ಕೇಳಿಸಿತು. ಓಡಿಬಂದ ಅಡಿಗೆಯಾಳಿಗೆ ಪೆನ್ ಮತ್ತು ಲೆಟರ್‌ಹೆಡ್ ತರಲು ತಿಳಿಸಿದರು.
ಕೇವಲ ಮೂರೇ ಸಾಲಿನಲ್ಲಿ ನಡುಗುವ ಕೈಯಿಂದ, ಟೌನ್ ಪೋಲೀಸ್ ಸ್ಟೇಶನ್ ಇನ್‌ಸ್ಟೆಕ್ಟರ್ ನಾಯಕ್‌ಗೆ ಜೋತ್ಸಾಳ ಫಾರಂ ಹೌಸ್‌ಸುತ್ತಲೂ ಸಾಯುಧ ಪೋಲೀಸರನ್ನು ಸುತ್ತುವರಿಸಲು ವಿನಂತಿ ಬರೆದು ಅಡಿಗೆಯಾಳಿನ ಕೈಗೆ ಕೊಟ್ಟು ಓಡಿಸಿದರು.

ಅಡಿಗೆಯಾಳಿಗೆ ಇದರ ತಲೆ ಬುಡ ಒಂದೂ ಅರ್ಥವಾಗದೆ, ಯಜಮಾನರ ಮುಖ ನೋಡಿ ಕೇಳುವ ಧೈರ್ಯವೂ ಬರದೆ ಆತ ಟೌನ್ ಪೋಲೀಸ್ ಸ್ಟೇಶನ್ ಕಡೆಗೆ ಓಟಕಿತ್ತ.

ಪೊಲೀಸರ ಸುಳಿವು ಡಕಾಯಿತರಿಗೆ ತಿಳಿದರೆ? ಮಗಳು ಮೊಮ್ಮಗಳ ಗತಿ? ಆ ಯೋಚನೆಯೇ ಡಾ.ಇನಾಂದಾರರಿಗೆ ನಡುಕ ಹುಟ್ಟಿಸಿತು. ಅವರ ದವಡೆ ಮಾಂಸ ಖಂಡಗಳು ಬಿಗಿದುಕೊಳ್ಳತೊಡಗಿದವು. ಹೆದರಿಕೆಯಿಂದ ಬೆನ್ನು ಮೂಳೆಯಲ್ಲಿ ಛಳಕು ಪ್ರಾರಂಭವಾಗಿ ನಡುಗತೊಡಗಿದರು.
ಮತ್ತೆ ಟೆಲಿಪೋನಿನಲ್ಲಿ ಧ್ವನಿ ಕೇಳಿಸಿತು, ಏಕಾಗ್ರಚಿತ್ತದಿಂದ ಆಲಿಸತೊಡಗಿದರು.
“ನೀನು ಒಂದು ತಾಸಿನೊಳಗೆ ರೊಕ್ಕದೊಂದಿಗೆ ತಿರುಗಿ ಬರದಿದ್ದರೆ ಎನಾಗ್ತದ ಗೊತ್ತದ ಅಲ್ಲ?”
ಸ್ವಲ್ಪ ಹೊತ್ತು ಮೌನ....
ಇದ್ದಕ್ಕಿದ್ದ ಹಾಗೆ ಅತ್ತಕಡೆ ಟೆಲಿಪೋನ್ ಹತ್ತಿರ ಯಾರೋ ನಡೆದು ಬರುತ್ತಿರುವ ಹೆಜ್ಜೆಯ ಸಪ್ಪಳ...
ಡಾ.ಇನಾಂದಾರರ ಮುಖದ ತುಂಬಾ ಬೆವರಿನ ಹನಿಗಳು ಆವರಿಸಿದವು. ಅವರ ಉಚ್ವಾಸ ನಿಶ್ವಾಸಗಳು ಅವರಿಗೇ ಕೇಳುವಷ್ಟು ಜೋರಾದವು. ಬಿ.ಪಿ. ಸ್ವಲ್ಪ ಸ್ವಲ್ಪವೇ ಏರತೊಡಗಿತು.
“ಓ ಗಾಡ್ ನಾನು ಏನು ನಡೆಯಬಾರದೆಂದು ಬಯಸಿದ್ದೆನೋ ಅದೇ ನಡೆಯಿತು” ಎಂದು ಕಿಸೆಯಲ್ಲಿದ್ದ ‘ಐಸಾರ್ ಡಿಲ್’ ಮಾತ್ರೆಯನ್ನು ನಾಲಿಗೆಯ ಕೆಳಗಿಟ್ಟುಕೊಂಡು ಒಂದು ಕೈಯಿಂದಾ ಎದೆಯ ಭಾಗ ಹಿಡಿದು ಪಕ್ಕದಲ್ಲಿದ್ದ ಕುರ್ಚಿಯಲ್ಲಿ ಕುಸಿಯತೊಡಗಿದರು.
ಟೆಲಿಪೋನ್‌ನಲ್ಲಿ ಎತ್ತರದ ಧ್ವನಿ ಕೇಳಿಸಿತು.....
“ಸಾರಿ ಡ್ಯಾಡಿ, ಹಾಲಿನವಗ ರೊಕ್ಕ ಕೊಟ್ಟು ಬರೋದು ತಡಾ ಆತು”.
ಜೋತ್ಸಾ ಏನು ಹೇಳುತ್ತಿದ್ದಾಳೋ ಡಾ.ಇನಾಂದಾರರಿಗೆ ಅರ್ಥವಾಗಲಿಲ್ಲ.

ಜೋತ್ಸಾಳ ಗಂಟಲು ಜೋರಾಗಿ ಕೂಗುತ್ತಿರುವ ಹಾಗೆ ಕೇಳಿಸಿತು.
“ಸುಶೀ.. ಟಿ.ವಿ. ಆಫ್ ಮಾಡಿ, ಹೋಂವರ್ಕ್ ಮಾಡು”.
“ಡ್ಯಾಡೀ, ಸುಶೀ ಭಾಳ ತುಂಟಿ ಆಗ್ತಿದಾಳೆ ಯಾವಾಗಲೂ ಟಿ.ವಿ. ಹಚಿಗೊಂಡು ನೋಡ್ತಿರ್ತಾಳ, ಅಂದ್ಹಾಂಗ ಏನು ಬೇಕಾಗಿತ್ತು? ಪೋನ್‌ ಮಾಡಿದಿರಿ?” ಎಂದು ಕೇಳಿದ ಜೋತ್ಸಾಳಿಗೆ.
“ಏನೂ ಇಲ್ಲವ್ವಾ, ಸುಮ್ನ ಮಾಡಿದೆ” ಎಂದು ಟೆಲಿಪೋನ್ ಕ್ರೆಡಿಲ್ ಮಾಡಿದರು.
ಡಾ.ಮೋಹನರಾವ್ ರಾಜಾರಾವ್ ಇನಾಂದಾರ ಅಪರಾಧ ಪರಿಶೋಧನ ಶಾಸ್ತ್ರಜ್ಞ ಎಂದು ಮುದ್ರಿಸಿದ್ದ ಲೆಟರ್ ಹೆಡ್ ಟೇಬಲ್ ಮೇಲೆ ಗಾಳಿಗೆ ಸರಿದಾಡುತ್ತಾ ತಮ್ಮನ್ನೇ ಗೇಲಿ ಮಾಡುತ್ತಿದೆಯೇನೋ ಎನಿಸಿತವರಿಗೆ.
0-0-0-0-0-0-0-0-0-0-0-0
ಈ ಕೆಳಗೆ ಪರಾಮರ್ಶನ ದಾಖಲೆಗಳಿವೆ. ನಿಮಗೆ ಬೇಕಾದ ಮಾಹಿತಿಗಾಗಿ ಸೂಕ್ತ ಕೊಂಡಿಯನ್ನು ಕ್ಲಿಕ್ಕಿಸಿ..!!
ಕರ್ನಾಟಕ ರಾಜ್ಯ ಪತ್ರ
ವಿಕಿಪೀಡಿಯಾ ವಿಶ್ವಕೋಶ
ದಾಸ ಸಾಹಿತ್ಯ ನಿಘಂಟು
ಶಬ್ಧಕೋಶ
ಕನ್ನಡ ಪದಕೋಶ
ಅನರ್ಥಕೋಶ
ಕನ್ನಡ-ಕನ್ನಡ-ಇಂಗ್ಲೀಷ್ ನಿಘಂಟು
ಕನ್ನಡ-ಹಿಂದಿ ನಿಘಂಟು
ಇಂಗ್ಲೀಷ್-ಕನ್ನಡ ನಿಘಂಟು(ಕನ್ನಡ ಕಸ್ತೂರಿ.ಕಾಂ)
ಕನ್ನಡ-ಕನ್ನಡ-ಇಂಗ್ಲೀಷ್ ನಿಘಂಟು
ಸಂಸ್ಕೃತ-ಕನ್ನಡ ನಿಘಂಟು
ಇಂಗ್ಲೀಷ್-ಕನ್ನಡ ಲೆಕ್ಕಾಚಾರ ಶಾಶ್ತ್ರ ಪಾರಿಭಾಷಿಕ ಪದಕೋಶ
ಇಂಗ್ಲೀಷ್-ಕನ್ನಡ ಆಡಳಿತಾತ್ಮಕ ಪದಕೋಶ
ಇಂಗ್ಲೀಷ್-ಕನ್ನಡ ಬ್ಯಾಂಕು ಮತ್ತು ವಾಣಿಜ್ಯ ಪಾರಿಭಾಷಿಕ ಪದಕೋಶ
ಇಂಗ್ಲೀಷ್-ಕನ್ನಡ ಸಸ್ಯಶಾಸ್ತ್ರ ಪಾರಿಭಾಷಿಕ ಪದಕೋಶ
ಇಂಗ್ಲೀಷ್-ಕನ್ನಡ ರಸಾಯನಶಾಸ್ತ್ರ ಪಾರಿಭಾಷಿಕ ಪದಕೋಶ
ಇಂಗ್ಲೀಷ್-ಕನ್ನಡ ಗಣಕ ವಿಜ್ಞಾನ ಪಾರಿಭಾಷಿಕ ಪದಕೋಶ
ಇಂಗ್ಲೀಷ್-ಕನ್ನಡ ವಿದ್ಯುನ್ಮಾನ ಶಾಸ್ತ್ರ ಪಾರಿಭಾಷಿಕ ಪದಕೋಶ
ಇಂಗ್ಲೀಷ್-ಕನ್ನಡ ಸಾಹಿತ್ಯ ವಿಮರ್ಶೆ ಪಾರಿಭಾಷಿಕ ಪದಕೋಶ
ಇಂಗ್ಲೀಷ್-ಕನ್ನಡ ಗಣಿತ ಶಾಸ್ತ್ರ ಪಾರಿಭಾಷಿಕ ಪದಕೋಶ
ಇಂಗ್ಲೀಷ್-ಕನ್ನಡ ವೈದ್ಯಕೀಯ ವಿಜ್ಞಾನ ಪಾರಿಭಾಷಿಕ ಪದಕೋಶ
ಇಂಗ್ಲೀಷ್-ಕನ್ನಡ ಮನಃಶಾಸ್ತ್ರ ಮತ್ತು ತತ್ವಶಾಸ್ತ್ರ ಪಾರಿಭಾಷಿಕ ಪದಕೋಶ
ಇಂಗ್ಲೀಷ್-ಕನ್ನಡ ಭೌತಶಾಸ್ತ್ರ ಪಾರಿಭಾಷಿಕ ಪದಕೋಶ
ಇಂಗ್ಲೀಷ್-ಕನ್ನಡ ರಾಜ್ಯಶಾಸ್ತ್ರ ಪಾರಿಭಾಷಿಕ ಪದಕೋಶ
ಇಂಗ್ಲೀಷ್-ಕನ್ನಡ ಪ್ರಾಣಿಶಾಸ್ತ್ರ ಪಾರಿಭಾಷಿಕ ಪದಕೋಶ
ಕನ್ನಡ ಕಾಗುಣಿತ ಪರೀಕ್ಷಕ
ಅವರ್ ಕರ್ನಾಟಕ.ಕಾಂ ಗಾದೆಗಳು
ಸಾಹಿತ್ಯ ಪುಟ ಕನ್ನಡ ಗಾದೆಗಳು
ಒಗಟುಗಳು
ಹಬ್ಬಗಳು(ವಿಕಿಪೀಡಿಯಾ)
ಕನ್ನಡ ರತ್ನ ಹಬ್ಬಗಳು
ವಾರದ ಭವಿಷ್ಯ
ಕನ್ನಡ ಗ್ರಂಥಗಳ ಸೂಚೀಕರಣ ಗ್ರಂಥ/ಲೇಖಕ/ಪ್ರಕಾಶಕ ಸೂಚಿ
ಕ್ಯಾಲೆಂಡರ್
ಕನ್ನಡ ಪಂಚಾಂಗ

####################################################################









THANKS FOR VISITING
YOU ARE VISITOR NO.



screen printingFree Counters
screen printing