s R.S.Venkataraju

Tuesday, August 08, 2006


ನಿಧಿ
(ಒಂದು ಸಣ್ಣಕತೆ)


-ಆರ್.ಎಸ್.ವೆಂಕಟರಾಜ್

ಒಂದು ಪುರಾತನ ದೃಶ್ಯ:

ಚೋಳರಾಜನ ಆಸ್ಥಾನ ಪಂಡಿತರಾದ ಅಗಸ್ತ್ಯ ಮುನಿಗಳ ವಂಶಸ್ಥರಾದ ಪ್ರಾಥಿವಧಿ ಮಹರ್ಷಿಗಳು, ಪರಿವಾರದೊಂದಿಗೆ ತಮಿಳು ಸೀಮೆಯಿಂದ ದೈವ ದರ್ಶನಕ್ಕೆಂದು ಮೈಸೂರು ಸೀಮೆಯ ಹಲವು ಕ್ಷೇತ್ರಗಳ ದರ್ಶನ ಪಡೆಯುತ್ತಾರಂತೆ. ಅಂತಹ ಸಂದರ್ಭದಲ್ಲಿ ಕೇಶವಾಪುರಕ್ಕೆ ಆಗಮಿಸುತ್ತಾರೆ. ಕೇಶವಾಪುರಕ್ಕೆ ಆತುಕೊಂಡೇ ಇದ್ದ ಚೆನ್ನಕೇಶವ ಬೆಟ್ಟ, ಬೆಟ್ಟದ ಮೇಲಿನ ದಟ್ಟಕಾಡು, ತಪಸ್ಸಿಗೆ ಪ್ರಶಸ್ತವಾದ ಗುಹೆಗಳು, ಎಲ್ಲದ್ದಕ್ಕೂ ಮಿಗಿಲಾಗಿ ಶಿಥಿಲಾವಸ್ಥೆಯಲ್ಲಿದ್ದ ಚೆನ್ನಕೇಶನ ದೇವಸ್ಥಾನ ಅವರನ್ನು ಆಕರ್ಷಿಸುತ್ತದೆ. ಸ್ಥಳ ಪುರಾಣದ ಅನುಸಾರ, ಪೂರ್ವದಲ್ಲಿ ಪ್ರತಿಷ್ಠಿತ ಸಂಸ್ಥಾನವಾಗಿದ್ದ ಕೇಶವಾಪುರದ ಈ ದೇವಸ್ಥಾನವನ್ನು ಇಮ್ಮಡಿ ಪುಲಕೇಶಿ ಮಹಾರಾಜ ಕಟ್ಟಿಸಿದನೆಂದು ಪ್ರತೀತಿ ಇದೆ. ಶಿಷ್ಯರೊಂದಿಗೆ ಅಂದಿನ ರಾತ್ರಿ ದೇವಸ್ಥಾನದಲ್ಲಿ ಬೀಡುಬಿಟ್ಟ ಪ್ರಾಥಿವಧಿ ಮಹರ್ಷಿಗಳ ಕನಸ್ಸಿನಲ್ಲಿ ಚೆನ್ನಕೇಶವನ ದರ್ಶನವಾಗಿ ಅಲ್ಲಿಯೇ ನೆಲೆಗೊಳ್ಳುವಂತೆ ಅಪ್ಪಣಿಯಾಗುತ್ತದೆ. ಪ್ರೇರಣೆಯನ್ನು ಚೋಳನಿಗೆ ಅರಿಕೆಮಾಡಿಕೊಂಡ ಮಹರ್ಷಿಗಳು, ಆಪ್ತಶಿಷ್ಯರಿಬ್ಬರು ಹಾಗೂ ಮಗಳು ಅವಧಿಯನ್ನು ಹೊರತುಪಡಿಸಿ ಉಳಿದವರನ್ನು ತಮಿಳು ಸೀಮೆಗೆ ಮರಳಲು ಅಪ್ಪಣೆ ಕೊಡುತ್ತಾರೆ.

ಸದರಿ ವಿಷಯವನ್ನು ತಿಳಿದ ಕೇಶವಾಪುರದ ಅಂದಿನ ಶ್ಯಾನುಭೋಗ ವೇದಾಂತಾಚಾರ್ಯರು ಘನಪಂಡಿತರೆಂದು ಕೇಳಿದ್ದ ಪ್ರಾಥಿವಧಿ ಮಹರ್ಷಿಗಳ ಕುಶಲ ವಿಚಾರಿಸಲು ಭೇಟಿನೀಡುತ್ತಾರೆ. ಪ್ರಾಥಿವಧಿ ಮಹರ್ಷಿಗಳು ಭೇಟಿಗೆ ನಿರಾಕರಿಸುತ್ತಾರೆ. "ನಮ್ಮಿಂದ ಅರಿಯದೇ ಅಪಚಾರವಾಗಿದ್ದರೆ ಆರ್ಯರು ಮನ್ನಿಸಬೇಕೆಂದು" ಅಂಗಲಾಚಿದಾಗ, ವೇದಾಂತಾಚಾರ್ಯರಿಗೆ ಭೇಟಿಗೆ ಅವಕಾಶ ಕಲ್ಪಿಸಿದ ಪ್ರಾಥಿವಧಿ ಮಹರ್ಷಿಗಳು ಕುಶಲೋಪರಿಯ ನಂತರ ಪಾಳು ಬಿದ್ದಿರುವ ಚೆನ್ನಕೇಶವ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ನಿತ್ಯ ಪೂಜೆ ಕುರಿತು, ಉತ್ಸವ ಮೂರ್ತಿಗಾಗಿ ಕೇಶವಾಪುರದಲ್ಲಿ ಒಂದು ಗುಡಿ ನಿರ್ಮಾಣ ಇತ್ಯಾದಿ ಅಂಶಗಳನ್ನು ತಿಳಿಸುತ್ತಾರೆ. "ತಮ್ಮ ಪಾದ ಸ್ಪರ್ಶದಿಂದ ಕೇಶವಾಪುರ ಪಾವನವಾಗಿದೆ, ತಮ್ಮ ಎಲ್ಲಾ ಆಜ್ಞೆಗಳನ್ನು ಶಿರಸಾವಹಿಸುತ್ತೇನೆ, ದೇವರು ನನಗೆ ಸಾಕಷ್ಟು ದಯಪಾಲಿಸಿದ್ದಾನೆ, ಮೌಢ್ಯರ ಮಧ್ಯೆ ನಾವೂ ಮೌಢ್ಯರಾಗಿದ್ದೇವೆ, ದಯಮಾಡಿ ಕೇಶವಾಪುರವನ್ನು ಕೈಹಿಡಿದು ನಡೆಸಬೇಕು. ನಿಮ್ಮ ಸೇವೆಗೆ ಐದು ಎಕರೆ ಮಾಗಾಣಿಯನ್ನು ಬಿಡುತ್ತೇನೆ, ಕರಾವಿಗೆ ಕಷ್ಟವಾಗದಂತೆ ಎರಡು ಹಸುವನ್ನು ಬಿಡುತ್ತೇನೆ. ದಯಮಾಡಿ ನನಗಿರುವ ಏಕಮಾತ್ರ ಕುಡಿ ವೈಷ್ಣವಾಚಾರ್ಯನಿಗೆ ವೇದಾಧ್ಯಯನ ಬೋಧಿಸಬೇಕು ಎಂದು ವಿನಮ್ರವಾಗಿ ವಿನಂತಿಸುತ್ತೇನೆ. ಸ್ವಾರ್ಥ ಎಂದು ತಿರಸ್ಕರಿಸಬಾರದು" ಎಂದು ಬೇಡಿಕೊಂಡರು. ಮನಸ್ಸಿನಲ್ಲೇ ನಗುತ್ತಾ ಪ್ರಾಥಿವಧಿ ಮಹರ್ಷಿಗಳು 'ಅಸ್ಥು' ಎಂದರು.

ವೈಷ್ಣವಾಚಾರ್ಯ ನಿತ್ಯವೂ ಬೆಟ್ಟವೇರಿ ಪ್ರಾಥಿವಧಿ ಮಹರ್ಷಿಗಳ ಇಬ್ಬರು ಶಿಷ್ಯರ ಜೊತೆಯಲ್ಲಿ ವೇದಾಧ್ಯಯನ ವಟುವಾಗಿ ನಿಷ್ಠೆಯಿಂದ ಅಧ್ಯಯನ ಮತ್ತು ಗುರುವಿನ ಸೇವೆ ಮಾಡತೊಡಗಿದ. ಮಹರ್ಷಿಗಳ ಮಗಳು ಅವಧಿ ನೈವೇದ್ಯಕ್ಕೆ ಅಣಿಮಾಡಿದರೆ, ಶಿಷ್ಯರು ಹೂವು ಮತ್ತು ದರ್ಬೆಯನ್ನು ಕಾಡಿನಿಂದ ಕೊಯ್ದುತರುತ್ತಿದ್ದರು. ಪೂಜಾ ಸಮಯ ಮತ್ತು ಶಿಷ್ಯರಿಗೆ ಬೋಧಿಸುವ ಸಮಯವನ್ನು ಹೊರತುಪಡಿಸಿ ಉಳಿದ ಸಮಯದಲ್ಲಿ ಪ್ರಾಥಿವಧಿ ಮಹರ್ಷಿಗಳು ದೇವಸ್ಥಾನದ ಹಿಂಭಾಗದ ಇಳಿಜಾರಿನಲ್ಲಿದ್ದ ಗುಹೆಸೇರಿ ತಪಸ್ಸಿನಲ್ಲಿ ಲೀನಲಾಗುತ್ತಿದ್ದರು.

ಮುಂದಿನದಲ್ಲವೂ ಇತಿಹಾಸ..ಚೆನ್ನಕೇಶವ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರವಾಯಿತು, ನಿತ್ಯ ಪೂಜೆ ಪ್ರಾರಂಭವಾಯಿತು. ಉತ್ಸವ ಮೂರ್ತಿಗಾಗಿ ಕೇಶವಾಪುರದಲ್ಲಿ ಒಂದು ಗುಡಿ ನಿರ್ಮಾಣವಾಯಿತು. ವರ್ಷಕೊಮ್ಮೆ ಚೆನ್ನಕೇಶವ ಸ್ವಾಮಿಯ ರಥೋತ್ಸವ ನಡೆಯತೊಡಗಿತು.

ಕಾಲಕ್ರಮೇಣದಲ್ಲಿ ಶ್ರಾವಣಮಾಸದ ಒಂದು ಮುಂಜಾನೆ ವೈಷ್ಣವಾಚಾರ್ಯ ಅಧ್ಯಯನಕ್ಕಾಗಿ ಬೆಟ್ಟದ ಕೊರಕಲು ದಾರಿಯನ್ನು ಏರಿಬರುತ್ತಿದ್ದಾಗ, ದೂರದಲ್ಲಿ ಗುರುಗಳ ಮಗಳು ಅವಧಿ ದರ್ಭೆಯನ್ನು ಕೊಯ್ಯುತ್ತಿರುವುದು ಕಾಣಿಸಿತು. ಹತ್ತಿರಹೋಗಿ ವಿಚಾರಿಸಿದಾಗ, ದಿನಸಿ ಮುಗಿದಿರುವುದರಿಂದ ಉಳಿದ ಶಿಷ್ಯರು ಊರೊಳಗಿನ ಅಗ್ರಹಾರಕ್ಕೆ ಹೋಗಿದ್ದಾರೆಂದು ತಿಳಿಸಿದಳು.

ಕಠಿಣ ಬ್ರಹ್ಮಚರ್ಯೆಯೂ ಅಧ್ಯಯನದ ಒಂದು ಭಾಗವಾಗಿದ್ದರಿಂದ, ಜೊತೆಯಲ್ಲೇ ಇದ್ದರೂ ಅವಧಿಯನ್ನು ಇಷ್ಟು ಹತ್ತಿರದಿಂದ ಅವಳನ್ನು ವೈಷ್ಣವಾಚಾರ್ಯ ಅಂದೇ ನೋಡಿರುವುದು. ಸ್ನಿಗ್ಧಕನ್ಯೆಯಾದ ಅವಳು ಹಾಲಿನಿಂದ ತೊಳೆದ ಚಂದನದ ಬೊಂಬೆಯಂತಿದ್ದಾಳೆ, ಶ್ಯಾಪಗ್ರಸ್ಥಳಾಗಿ ಭೂಲೋಕಕ್ಕೆ ಬಂದ ಅಪ್ಸರೆಯಂತೆ ಕಂಗೊಳಿಸುತ್ತಾಳೆ. ಅವಧಿಯ ಪರಿಸ್ಥಿತಿಯೂ ಸಮಾನ ಚಿಂತನೆಯಲ್ಲಿ ಡೋಲಾಯಮಾನವಾಗಿತ್ತು. ಅಷ್ಟು ಹತ್ತಿರನಿಂತ ವೈಷ್ಣವಾಚಾರ್ಯನ ಸುರದ್ರೂಪ ಅವಳಿಗೆ ಮಂಕು ಕವಿಸಿತು. ನಾರುಮಡಿಯ ವಸ್ತ್ರದ ಮಡಿಲಲ್ಲಿ ಕೊಯ್ದಿದ್ದ ದರ್ಭೆ ಮತ್ತು ಹೂವು ಅವಳಿಗೆ ಅರಿವಿಲ್ಲದಂತೆ ಕೆಳಗೆ ಚೆಲ್ಲಿದವು. ನಾಚಿಕೆಯಿಂದ ಕಾಲಿನ ಹೆಬ್ಬೆರಳಿಂದ ನೆಲವನ್ನು ಮೀಟತೊಡಗಿದಳು. ಶ್ರಾವಣ ಮಾಸದ ಆಹ್ಲಾದತೆಯ ಪ್ರಕೃತಿಯಲ್ಲಿ ಕಾಮದೇವನ ಧನಸ್ಸಿನಿಂದ ಬಾಣವೊಂದು ಚಿಮ್ಮಿತು.. ಎರಡು ಜೀವಗಳು ಇನ್ನೇನು ಒಂದಾಗುವ ಸಂದರ್ಭದಲ್ಲಿ .. ಹಿಂದಿನ ಗುಹೆಯಿಂದ ತರಗೆಲೆಮೇಲೆ ಹೆಜ್ಜೆಯಿಟ್ಟ ಸಪ್ಪಳ ಕೇಳಿಸಿತು. ಕಾಡು ಪ್ರಾಣಿಯಿರಬೇಕು ಎಂದು ಇಬ್ಬರೂ ಹಿಂತಿರುಗಿ ನೋಡಿದಾಗ.. ವ್ಯಾಘ್ರರಾದ ಪ್ರಾಥಿವಧಿ ಮಹರ್ಷಿಗಳು ಕಮಂಡಲದಿಂದ ಗಂಗೆಯನ್ನು ಬಲಗೈಗೆ ಸುರಿದು..ಹಣೆಗೆ ಮುಟ್ಟಿಸಿ, ಮನಸ್ಸಿನಲ್ಲೇ ಮಂತ್ರ ಜಪಿಸಿ 'ಕಾಮಾತುರನಾದ ನೀನು ಷಂಡನಾಗು..ರೌರವ ನರಕಕ್ಕೆ ಹೋಗು' ಎಂದು ವೈಷ್ಣವಾಚಾರ್ಯನ ತಲೆಯಮೇಲೆ ಪ್ರೋಕ್ಷಿಸಿ ಶಾಪ ನೀಡಿದರು. ನಾಚಿಕೆ ಅವಮಾನದಿಂದ ಕುಪಿತಗೊಂಡ ಅವಧಿ ದೇವಸ್ಥಾನದ ಕಡೆಹೊರಟರೆ.. ವೈಷ್ಣವಾಚಾರ್ಯ ತಲೆ ತಗ್ಗಿಸಿ ಕೊರಕಲು ದಾರಿಯ ಮೂಲಕ ಬೆಟ್ಟವನ್ನು ಇಳಿಯುತ್ತಾ ಅಗ್ರಹಾರದ ಕಡೆ ಹೊರಟ.

ವಿಷಯ ತಿಳಿದ ವೇದಾಂತಾಚಾರ್ಯ ಬೆಳೆದ ಮಗ ವೈಷ್ಣವಾಚಾರ್ಯ ಎನ್ನುವುದನ್ನೂ ನೋಡದೆ ದನಕ್ಕೆ ಬಡಿದಹಾಗೆ ಬಡಿದು, ಪ್ರಾಥಿವಧಿ ಮಹರ್ಷಿಗಳ ಕ್ಷಮೆಯಾಚಿಸಲು ಚೆನ್ನಕೇಶವನ ಬೆಟ್ಟ ಏರತೊಡಗಿದರು. ಎದುರಿಗೆ ಪ್ರಾಥಿವಧಿ ಮಹರ್ಷಿಗಳು ಇಳಿದು ಬರುತ್ತಿದ್ದರು. ಇಬ್ಬರು ಶಿಷ್ಯರು ತಲೆಯಮೇಲೆ ಸಾಮಾನು ಸರಂಜಾಮು ಹೊತ್ತಿದ್ದರು, ಎಲ್ಲರಿಗಿಂತ ಹಿಂದೆ ಅವಧಿ ನಿಧಾನವಾಗಿ ಇಳಿಯುತ್ತಿದ್ದಳು. ಓಡಿಹೋಗಿ ಪ್ರಾಥಿವಧಿ ಮಹರ್ಷಿಗಳ ಕಾಲು ಹಿಡಿದು "ಮಹಾಪ್ರಭು ಘೋರ ಅಪರಾಧವಾಗಿದೆ..ದಯಾಳುಗಳು ಶಾಂತಿಸಬೇಕು. ಒಬ್ಬನೇ ಮಗ, ಪೀಳಿಗೆ ನಿಂತುಹೋಗುತ್ತದೆ.. ದಯವಿಟ್ಟು ಶಾಪವನ್ನು ಹಿಂದೆ ಪಡೆಯಬೇಕು" ಎಂದು ಕಣ್ಣೀರಿನಿಂದ ಅವರ ಕಾಲನ್ನು ತೊಳೆದರು. "ವೇದಾಂತಾಚಾರ್ಯ ಕೊಟ್ಟ ಶಾಪವನ್ನು ಹಿಂಪಡೆಯುವ ಪ್ರಶಕ್ತಿಯೇ ಇಲ್ಲ..ಏಕೆಂದರೆ..ಯಾವ ಕಾಲಕ್ಕೆ ಏನು ಆಗಬೇಕೋ ಅದು ಆಗಿಯೇ ತೀರಬೇಕು..ಅದು ಮೊದಲೇ ನಿರ್ಣಯವಾಗಿರುತ್ತದೆ..ಇದರಲ್ಲಿ ನಾವೆಲ್ಲರೂ ನಿಮಿತ್ತ ಮಾತ್ರ" ಎಂದರು. "ಇಲ್ಲ ಮಹಾಪ್ರಭು ಪ್ರಾಯಶ್ಚಿತ್ತವಾಗಿ ನನ್ನ ಪ್ರಾಣವನ್ನೇ ಹರಣಮಾಡುತ್ತೇನೆ..ತಾವು ನನ್ನ ಕೋರಿಕೆಗೆ ಅಸ್ಥು ಎನ್ನುವವರೆಗೂ ನಿಮ್ಮ ಪಾದವನ್ನು ಬಿಡುವುದಿಲ್ಲ." ಎಂದು ಕಾಲುಗಳನ್ನು ಗಟ್ಟಿಯಾಗಿ ಹಿಡಿದ ವೇದಾಂತಾಚಾರ್ಯರಿಗೆ, "ನಿಮ್ಮ ಭಕ್ತಿಗೆ, ಶ್ರದ್ಧೆಗೆ ನಾವು ಪ್ರಸನ್ನರಾಗಿದ್ದೇವೆ. ಎದ್ದೇಳಿ ಶಾಪದ ಗಡುವನ್ನು ವಿಸ್ತರಿಸುತ್ತೇವೆ..ನಾವು ಕೊಟ್ಟ ಶಾಪ ಮುಂದಿನ ಪೀಳಿಗೆಗೆ ಅರ್ಥಾತ್ ನಿಮ್ಮ ಮೊಮ್ಮಗನಾಗಿ ಜನ್ಮತಾಳಿವ ಕೇಶವಾಚಾರ್ಯ ನಾಮಸ್ಥನಿಗೆ ಅನ್ವಯಿಸುತ್ತದೆ..ನಿಮ್ಮ ತತ್ಪರತೆಗೆ ಮೆಚ್ಚಿದ್ದೇನೆ..ಉಪಸಂಹಾರವಾಗಿ ಒಂದು ವರ ನೀಡುತ್ತೇವೆ..ಲಕ್ಷ್ಮಿ ನಿಮ್ಮ ಮನೆಯಲ್ಲಿ ಕ್ಷೀಣಿಸದಿರಲಿ ತಥಾಸ್ಥು." ಎಂದು ಪ್ರಾಥಿವಧಿ ಮಹರ್ಷಿಗಳು ಶಿಷ್ಯರಸಮೇತ ಬೆಟ್ಟವನ್ನು ಇಳಿಯತೊಡಗಿದರು. ಅಂಕದಪರದೆ ಜಾರಿದ ನಂತರ ನಟಿಗೆ ಇರುವ ಉದ್ವಿಗ್ನತಾ ಭಾವದೊಂದಿಗೆ ಮಗಳು ಅವಧಿ ತಿರುವಿನಲ್ಲಿ ಮರೆಯಾದಳು.

ಹಗೇವಿನ ಪ್ರಸಂಗ:

ನಸುಕಿನ ತಿಳಿ ಬೆಳದಿಂಗಳಲ್ಲಿ ವೆಂಕು ಒಬ್ಬಳೇ ಬತ್ತದ ಹಗೇವಿಗೆ ಏಣಿಯ ಮೂಲಕ ಇಳಿದು, ಬೆಳಿಗ್ಗೆ ಬತ್ತ ಕುಟ್ಟಲು ಬರುವ ಆಳುಗಳ ಸಂಖ್ಯೆಯನ್ನು ಮನಸ್ಸಿನಲ್ಲೇ ಮೂಡಿಸಿಕೊಂಡು, ಕಡೆಯ ಪಕ್ಷ ಎರಡು ಪಲ್ಲಬತ್ತವಾದರೂ ಹಗೇವಿನಿಂದ ಹೊರಮೊಗೆದು ಅಂಗಳದಲ್ಲಿ ಹಾಕಬೇಕು ಎಂದು ಎಣಿಸಿದಳು. ಬೆಳ್ಳಿ ಚುಕ್ಕಿ ಮೂಡಿದ್ದರೂ, ದೂರದ ದೇವಸ್ಥಾನದ ರಥಬೀದಿಯಲ್ಲಿ ಚೆನ್ನಕೇಶವನ ರಥೋತ್ಸವದ ಗೌಜುಗದ್ದಲ ಅಲೆ ಅಲೆಯಾಗಿ ಊರತುಂಬೆಲ್ಲಾ ಪಸರಿಸುತ್ತಲೇ ಇತ್ತು. ರಥೋತ್ಸವಕ್ಕೆ ಹೋದ ಜೀತದಾಳುಗಳನ್ನು, ರಥೋತ್ಸವಕ್ಕೆಂದು ಬಂದ ನೆಂಟರಿಷ್ಟರನ್ನು, ಊರಿನ ಉಸಾಬರಿಯಲ್ಲಾ ತನ್ನದೇ ಎಂದು ತಿರುಗುವ ಗಂಡ ಶ್ಯಾನುಭೋಗ ಕೇಶವಾಚಾರ್ಯರನ್ನು ಮನಸ್ಸಿನಲ್ಲೇ ಹಿಡಿಶಾಪಹಾಕುತ್ತಾ, ತನ್ನ ಹಣೆ ಬರಹವೇ ಹೀನವಾಗಿದ್ದಾಗ ಯಾರನ್ನು ಅಂದು ಏನು ಪ್ರಯೋಜನ ಎಂದು ಮಂಕರಿಯಲ್ಲಿ ಬತ್ತ ತುಂಬತೊಡಗಿದಳು.

ಆಳುಗಳೆಲ್ಲಾ ತೇರು ನೋಡಲು ಹೋಗಿರುವುದು ಗೊತ್ತಿದ್ದ ಶೇಷಣ್ಣ ದೆವ್ವದಂಥಹ ತಲೆಬಾಗಿಲನ್ನು ದೂಡಿಕೊಂಡು ಒಳಬಂದು "ಏ ಮಂಜ್ಯಾ..ಲೇ ತಿಪ್ಪಣ್ಣಾ..ಎಲ್ಲಿ ಸತ್ತಿದ್ದೀರೋ ಎಲ್ಲಾ.., ಗದ್ದೆಗೆ ಏತ ಎತ್ತಬೇಕು. ಮನೇಲಿ ನೋಡಿದರೆ ನೆಂಟರು ಬಂದವರೆ .. ಕೆಲಸ ಎಷ್ಟತೈ..ಏನ್ಕತೆ ?" ಎಂದು ಕೂಗಾಡತೊಡಗಿದ.

ಹಗೇವಿನೊಳಗೆ ಇಳಿದಿದ್ದ ವೆಂಕುವಿಗೆ ಆ ಧ್ವನಿಯಾರದೆಂದು ಸ್ಪಷ್ಟವಾಗಲಿಲ್ಲ. ಮಂಕರಿಯಲ್ಲಿ ಬತ್ತವನ್ನು ಹೊತ್ತು ಏಣಿಹತ್ತಿ ಹೊರಬಂದಳು. ಮಬ್ಬು ಕತ್ತಲೆಯಲ್ಲಿ ಏಕ್‌ದಂ ಶೇಷಣ್ಣನನ್ನು ನೋಡಿ ಕೊಂಚ ಬೆದರಿ, "ನೀನಾ ಶೇಷಪ್ಪಣ್ಣಾ..ನಾನು ಯಾರೋ ಅಂದುಕೊಂಡೆ..ಮನೇಲಿ ಯಾರೂ ಇಲ್ಲ..ಎಲ್ಲರೂ ರಥೋಸ್ಥವಕ್ಕೆ ಹೋಗೌವ್ರೆ" ಎಂದು ಅಸ್ಥವ್ಯಸ್ಥವಾಗಿದ್ದ ಸೆರಗನ್ನು ಸರಿಪಡಿಸಿಕೊಂಡಳು. "ಹೌದಾ ನೀವ್ಯಾವಾಗ ಮನೆಗೆ ಬಂದ್ರಿ ವೆಂಕತ್ತೆ?" " ತೇರು ಕುಂಬಾರರ ಓಣಿಗೆ ತಿರುಗಿದಾಗ ಬಂದೆ..ನಸುಕಿನಲ್ಲೇ ಆಳುಗಳು ಬತ್ತ ಕುಟ್ಟೋಕೆ ಬರ್ತಾರೆ..ಅದ್ಕೇಯ ಹಗೇವಿನಿಂದ ಬತ್ತ ಹೊರ್ತಾಇದ್ದೀನಿ..ನಿನ್ನೆ ಸಂಜೇಲೆ ಆ ಮಂಜನಿಗೆ ಹೇಳಿದ್ದೆ, ಕಡೇಕೆ ಆಳುಗಳಿಗೂ ಅಲುಸಾಗಿಬಿಟ್ಟೆ ನೋಡಿ".

"ಬಿಡೀ ವೆಂಕತ್ತೆ ಯ್ಯಾಕೆ ಬೇಜಾರು ಮಾಡ್ಕೋತೀರಿ..ನಾನಿಲ್ಲವೇ, ಕೊಡೀ ಮಂಕರಿಯಾ ನಾನು ಬತ್ತವನ್ನು ತುಂಬುತ್ತೇನೆ..ನೀವು ಅಂಗಳದಲ್ಲಿ ಹಾಕುವಿರಂತೆ," ಎಂದು ಮಂಕರಿ ಹಿಡಿದು ಏಣಿ ಮೂಲಕ ಹಗೇವಿಗೆ ಇಳಿಯುತ್ತಾ, ಹಿಂದೆ ಇಳಿಯುತ್ತಿದ್ದ ವೆಂಕುವನ್ನು ಕುರಿತು "ಈ ಶ್ಯಾನುಬೋಗ ಕೇಶವಾಚಾರ್ಯರನ್ನು ಕಟ್ಟಿಕೊಂಡು ನಿಮಗೆ ಯಾವುದೇ ಸುಖವಿಲ್ಲದಾಗಿದೆ ನೋಡಿ ವೆಂಕತ್ತೆ..ಈ ಚಿಕ್ಕ ವಯಸ್ಸಿಗೇ ನೀವು ಪಡೋ ಕಷ್ಟ ನೋಡಿದ್ರೆ ನನಗಂತೂ ಕರುಳು ಚುರುಕ್ ಅನಿಸುತ್ತೆ" ಎಂದಾಗ ಹಗೇವಿನ ಗೊಡೆಗೆ ಆತುಕೊಂಡಿದ್ದ ಹಲ್ಲಿ ಲಚ್..ಲಚ್..ಲಚ್.. ಎಂದು ಶಬ್ಧಮಾಡಿದ್ದು ನೋಡಿ "ಕೃಷ್ಣ..ಕೃಷ್ಣ..ಸತ್ಯ ನೋಡಿ" ಎಂದ. ಸೀರೆ ಸೆರಗನ್ನು ಸಿಂಬೆಯಂತೆ ಸುತ್ತಿ ತಲೆಮೇಲಿಟ್ಟು "ಯಾವ ಜನ್ಮದಲ್ಲಿ ಮಾಡಿದ ಪಾಪವೋ ಕರ್ಮವನ್ನು ಸವೆಸಬೇಕು ಶೇಷಪ್ಪಣ್ಣ" ಎಂಧು ನಿರ್ಲಿಪ್ತವಾಗಿ ತುಂಬಿಸಿದ ಬತ್ತದ ಮಂಕರಿಯನ್ನು ಅವನು ಹೊರೆಸಿದಾಗ ಅಂಗಳದಲ್ಲಿ ಸುರಿಯಲು ಹೊರಟಳು. ಮೂರನೇ ಮಂಕರಿ ತಲೆಮೇಲೆ ಹೊರಸುವಾಗ "ವೆಂಕತ್ತೇ ಈ ಸಲ ಬರುವಾಗ ಬುಡ್ಡಿ ದೀಪ ಒಂದು ಕೋಲು ತಗಂಡು ಬನ್ನಿ..ಆ ಮೂಲೇಲಿ ನೋಡಿ ಹಾವು ಹರಿದಾಡಿದಂಗೈತೆ". ಅವನು ಹಾಗೆ ಅಂದದ್ದೇ ತಡ ಘಾಬರಿಯಾದ ವೆಂಕು ತಲೆ ಮೇಲಿನ ಭಾರದ ಮಂಕರಿ ಬತ್ತವನ್ನು ಕೆಳಗೆ ಚೆಲ್ಲಿ ಬಿಗಿಯಾಗಿ ಶೇಷಪ್ಪನನ್ನು ಹಿಡಿದಳು. ದಪ್ಪ ಪುಷ್ಪವಾಗಿದ್ದ ವೆಂಕುವಿನ ಭಾರಕ್ಕೆ ಅವನು ಆಯ ತಪ್ಪಿ ಅವಳನ್ನು ಹಿಡಿದೇ ಹಿಂದೆ ಬಿದ್ದನು. ಸಂಕೋಚದಿಂದ ಮುದುಡಿದ ವೆಂಕು ಸಾವರಿಸಿಕೊಂಡು..ಏಣಿ ಹತ್ತಿ ಬುಡ್ಡಿ ದೀಪ ಕೋಲು ತಗಂಡುಬರಲು ಹೋದಳು. ಶೇಷಪ್ಪನ ತಲೆತುಂಬೆಲ್ಲಾ ಹಾವಿನದೇ ಚಿಂತೆ ಸುತ್ತಿಕೊಂಡಿತು. ತದೇಕ ಚಿತ್ತದಿಂದ ಕಣ್ಣು ಕಿಸಿದು ಹಾವನ್ನೇ ನೋಡತೊಡಗಿದ. ಹಾವು ಕಾಟುಹಾಕಿದರೆ ಹೇಗೆ? ಏಣಿ ಹತ್ತಿ ಮೇಲೆ ಹೋದರೆ? "ನೀನೆಂಥಾ ಗಂಡಸು" ಎಂದು ವೆಂಕತ್ತೆ ಹೇಳಿದರೆ? ಕಷ್ಟದಲ್ಲಿರುವ ಹೆಂಗಸಿಗೆ ಸಹಾಯ ಮಾಡದಿದ್ದರೆ ಹೇಗೆ? ಹೀಗೆ ತರ್ಕ ವಿತರ್ಕ ವಾದಗಳು ಹಾವಿನಂತೆ ನರ್ತನ ಮಾಡುವ ಸಂದರ್ಭದಲ್ಲೇ, ವೆಂಕು ಬುಡ್ಡಿ ದೀಪ, ಕೋಲು ತಗಂಡು ಏಣಿ ಇಳಿದಳು. ಎಡಗೈಯಲ್ಲಿ ದೀಪ, ಬಲಗೈಯಲ್ಲಿ ಕೋಲು ಹಿಡಿದು ಶೇಷಪ್ಪ ದೀಪವನ್ನು ಹಾವಿನ ಹತ್ತಿರ ತಂದು ಇನ್ನೇನು ಹಾವನ್ನು ಬಡಿಯಬೇಕು ಎನ್ನುವಾಗ..ಅದು ಹಾವಾಗಿರದೇ ಡೊಂಕಾಗಿ ಹಾವಿನ ಆಕಾರದಲ್ಲಿದ್ದ ಸೆಣಬಿನ ನಾರಾಗಿತ್ತು."ಹೆದರುಪುಕ್ಕಲ" ಎಂದು ವೆಂಕು ಗಹಗಹಿಸಿ ನಕ್ಕಳು. ಸೆಣಬಿನನಾರನ್ನು ಕೈಲಿ ಹಿಡಿದ ಶೇಷಪ್ಪ "ಹಾವು ವೆಂಕತ್ತೆ" ಎಂದು ಅವಳ ಕೊರಳಿಗೆ ಹಾಕಿದ. "ಥೂ ನಿನ್ನ" ಎಂದ ವೆಂಕು ಅವನನ್ನು ದೂಡಲುಹೋಗಿ ಆಯ ತಪ್ಪಿ ಅವನ ಮೇಲೆ ಬಿದ್ದಳು. ಶೇಷಪ್ಪ ಕೈಲಿದ್ದ ಬುಡ್ಡಿ ದೀಪ ಕೆಳಗೆ ಬಿದ್ದು ಬತ್ತಕ್ಕೆ ಬೆಂಕಿ ಬಿತ್ತು. ಆದರೆ ಅವರಿಬ್ಬರೂ ಅದನ್ನು ಗಮನಿಸುವ ಪರಿಸ್ಥಿತಿಯಲ್ಲಿರಲಿಲ್ಲ.

ಕೇಶವಾಪುರಕ್ಕೆ ವಕ್ಕರಿಸಿದ ಶನಿ:

ಅಂದು ಮುಂಜಾನೆಯೇ ದ್ಯಾವಲಾಪುರದ ರಾಮೇಗೌಡ ಕಳೆದು ಹೋದ ಹಸುವನ್ನು ಕುರಿತು ಕವಡೆ ಶಾಸ್ತ್ರ ಕೇಳಲು ಶ್ಯಾನುಬೋಗರಾದ ಕೇಶವಾಚಾರ್ಯರ ಹೊಸಲು ತುಳಿದಿದ್ದ. ಎಲೆ ಅಡಿಕೆ ಮೇಲೆ ದಕ್ಷಿಣೆಯಾಗಿ ಒಂದು ಬೆಳ್ಳಿ ನಾಣ್ಯ, ತೆಂಗಿನಕಾಯಿ, ಇತ್ಯಾದಿ ಸಾಮಗ್ರಿಗಳನ್ನು ಕಟ್ಟೆಯ ಮೇಲಿಟ್ಟ. ಕವಡೆ ಪಂಚಾಗದೊಂದಿಗೆ ಹೊರಬಂದ ಕೇಶವಾಚಾರ್ಯರು ಹಸುವಿನ ಚಹರೆಗಳನ್ನು ಕೇಳಿ ಕವಡೆ ಹಾಕಿ, ಸರಿ ಬೆಸಗಳನ್ನು ನೋಡಿ ಲೆಕ್ಕಹಾಕಿ "ರಾಮೇಗೌಡ್ರೇ ನಿಮ್ಮ ಹಸು ಪಡುವಣ ದಿಕ್ಕಿನ ಎರಡು ಗಾವುದ ದೂರದಲ್ಲಿದೆ, ಏನೂ ಯೋಚನೆ ಮಾಡಬೇಡಿ, ದೊರೆಯುತ್ತದೆ" ಎನ್ನುತ್ತಿರುವ ಸಂದರ್ಭದಲ್ಲೇ ತಲೆಬಾಗಿಲ ಹತ್ತಿರ 'ಭವತೀ ಬಿಕ್ಷಾಂದೇಹಿ' ಎಂದು ಕೇಳಿಸಿತು.

"ಲೇ ಇವಳೇ ಯಾರೋ ಬಿಕ್ಷುಕರು ಬಂದಿದ್ದಾರೆ ಬಿಕ್ಷೆ ಹಾಕೇ" ಎಂದು ಕೇಶವಾಚಾರ್ಯರು ಮನೆಯೊಳಗೆ ತಿರುಗಿ ಹೇಳಿದರು. ಬಿಕ್ಷೆಗಾಗಿ ಬಂದ ವ್ಯಕ್ತಿ ನೇರ ಕಟ್ಟೆಯ ಹತ್ತಿರವೇ ಬಂದ. ಸುರದ್ರೂಪಿ ಆಜಾನುಭಾಹುವಾದ ಅವನ ಕಣ್ಣಲ್ಲಿ ವಿಚಿತ್ರವಾದ ತೇಜಸ್ಸಿತ್ತು "ನಾವು ಬಿಕ್ಷುಕರಲ್ಲ, ನಿಮ್ಮ ಬಿಕ್ಷೆಗೆ ದಿಕ್ಕಾರ, ನೀವು ಶಾಸ್ತ್ರ ಹೇಳಿದ ಹಾಗೆ ಕಳೆದು ಹೋದ ರಾಮೇಗೌಡರ ಹಸು ಪಡುವಣ ದಿಕ್ಕಿನ ಬದಲಾಗಿ, ಚೆನ್ನಕೇಶವನ ಬೆಟ್ಟದ ಹಿಂಭಾಗದ ದಿಕ್ಕಿನ ನರಸಾಪುರದ ಕಾಡಿನಲ್ಲಿ ಹುಲಿಗೆ ಆಹುತಿಯಾಗಿದೆ". ಅವನ ಮಾತುಗಳು ಮರ್ಮಕ್ಕೆ ತಾಗಿದಂತಾಗಿ ಅವಮಾನಗೊಂಡ ಕೇಶವಾಚಾರ್ಯರು "ಅದಕ್ಕೆ ಪ್ರಮಾಣವೇನು?" ಎಂದು ಪ್ರಶ್ನಿಸಿದರು. ಜೋಳಿಗೆಯಿಂದ ಡಬ್ಬಿಯನ್ನು ತೆಗೆದ ಆಗಂತುಕ ಅದರಲ್ಲಿದ್ದ ಅಂಜನವನ್ನು ಕಟ್ಟೆಯಮೇಲಿದ್ದ ವೀಳೆದೆಲೆಗೆ ಸವರಿ, 'ನೋಡಿ' ಎಂದ. ಅಂಜನದಲ್ಲಿ ನರಸಾಪುರದ ಕಾಡಿನಲ್ಲಿ ದ್ಯಾವಲಾಪುರದ ರಾಮೇಗೌಡರ ಹಸುವಿನ ಕುತ್ತಿಗೆಯನ್ನು ಹಿಡಿದಿದ್ದ ಹುಲಿ ಅತ್ತಿತ್ತ ಎಳೆದಾಡುತ್ತಿತ್ತು. ಅಷ್ಟರಲ್ಲಿ ವೆಂಕೂಬಾಯಿ ಮೊರದ ತುಂಬಾ ಅಕ್ಕಿಯನ್ನು ತುಂಬಿಕೊಂಡು ಬಿಕ್ಷೆನೀಡಲು ನಡುಮನೆ ದಾಟಿ ಹೊರಬಂದು, ಆಗಂತುಕನನ್ನು ಕಂಡು ಅವಾಕ್ಕಾಗಿ "ನೀನು ಶೇಷಣ್ಣ ಅಲ್ಲವೇ?" ಅಂದರು. ಆಗಂತುಕ "ಅರೆ...ನೀನು ವೆಂಕತ್ತೆ ಇಲ್ಲಿ...!" ಶೇಷಣ್ಣ ವೆಂಕೂಬಾಯಿಯ ತೌರುಮನೆಯ ದೂರದ ನೆಂಟ, ವರಸೆಯಲ್ಲಿ ಅಳಿಯನಾಗುತ್ತಾನೆ. ಅವನು ಚಿಕ್ಕವನಿದ್ದಾಗಲೇ ಮನೆ ಬಿಟ್ಟು ಸಾಧುಗಳ ಜೊತೆಸೇರಿ ದೇಶಾಂತರ ಹೋಗಿರುತ್ತಾನೆ.

"ಶೇಷಣ್ಣ ನೀನು ವೆಂಕುವಿಗೆ ದೂರದ ಸಂಬಂಧಿಯಾದರೆ, ನನಗೂ ನೆಂಟ ಆದ ಹಾಗಾಯಿತು, ನಮಗೆ ದೇವರು ಸಾಕಷ್ಟು ಕರುಣಿಸಿದ್ದಾನೆ..ನೀನು ಇಲ್ಲಿಯೇ ಇದ್ದು ಹೊಲ, ಗದ್ದೆಗಳ ಪಾರುಪತ್ತೆಯನ್ನು ನೋಡಿಕೊಳ್ಳಬಹುದಲ್ಲ" ಎಂದ ಕೇಶವಾಚಾರ್ಯರ ಮಾತುಗಳಿಗೆ ವೆಂಕತ್ತೆಯೂ ಧ್ವನಿಗೂಡಿಸಿದಾಗ, ಜುಲುಮೆಯಿಂದಲೇ ಶೇಷಣ್ಣ ಒಪ್ಪಿಕೊಳ್ಳುತ್ತಾನೆ. ಅಲ್ಲಿಗೆ ಶ್ಯಾನುಭೋಗ ಕೇಶವಾಚಾರ್ಯರ ಮನೆತನದ ದುರಂತ ಪ್ರಾರಂಭವಾಗುತ್ತದೆ.


ನನ್ನನ್ನು ಕರೆದುಕೋ:

ಹೋದ ವರ್ಷದ ಮಳೆಗಾಲದಲ್ಲಿ ಶ್ಯಾನುಭೋಗ ಕೇಶವಾಚಾರ್ಯರ ತಾತನ ಕಾಲದ ಹಳೆಯ ತೊಟ್ಟಿ ಮನೆಯ ಮೂಡಲ ಭಾಗದ ತೇಗದ ಭಾರೀ ತೊಲೆ ಮುರಿದು ಬಿದ್ದಿದ್ದರಿಂದ, ಅದರ ಪಕ್ಕದಲ್ಲೇ ಮಹಡಿ ಮನೆಯನ್ನು ಕಟ್ಟಲಾಯಿತು. ಸುತ್ತೂ ಏಳು ಹಳ್ಳಿಗಳ ಶ್ಯಾನುಬೋಗಿಕೆ ಕೇಶವಾಚಾರ್ಯರಿಗೇ ಸೇರುತ್ತದಾದುದರಿಂದ, ಗೃಹ ಪ್ರವೇಶವನ್ನು ಅತ್ಯಂತ ಅದ್ಧೂರಿಯಾಗಿ ಮಾಡಬೇಕೆಂದು ಶೇಷಣ್ಣ ಸೂಚಿಸಲು, ಹಣದ ಅಡಚಣಿ ಕುರಿತು ಕೇಶವಾಚಾರಿ ಕೈಚೆಲ್ಲುತ್ತಾರೆ. "ಕೇಶವಮಾವ ಎಂಥಾ ಮನೆತನ ನಿಮ್ಮದು..ಸರಳವಾಗಿ ಗೃಹ ಪ್ರವೇಶ ಮಾಡಿದರೆ ಸರೀಕರು ಆಡಿಕೊಳ್ಳಲ್ಲವೇ..?ನಿಮ್ಮ ತಾತನವರಾದ ವೇದಾಂತಾಚಾರ್ಯರ ಹೆಸರು ಈ ಸೀಮೆಲೇ ಹೆಸರುವಾಸಿ ಅವರು ಪಂಚಾಗ ಹಿಡಿದು ಕುದುರೆ ಸಾರೋಟು ಹತ್ತಿ ರಸ್ತೆಗೆ ಬಂದರೆ ಅಮಲ್ದಾರ..ಸಿರಸ್ಥೇದಾರಯಾಗಿ ಎಲ್ಲರೂ ನಡುಬಗ್ಗಿಸಿ ಸಲಾಮು ಮಾಡುತ್ತಿದ್ದರಂತೆ. ಒಮ್ಮೆ ಮೈಸೂರು ಸೀಮೆಗೆ ಹೋದಾಗ, ಮೈಸೂರು ಮಾರಾಜರೇ ಸಿಂಹಾಸನದಿಂದ ಇಳಿದುಬಂದು ಅವರ ಕೈಗೆ ಬಂಗಾರದ ಕಡಗ ತೊಡೆಸಿ ಬರಮಾಡಿಕೊಂಡಿದ್ದರಂತೆ, ಅಂಥಹ ವಂಶಸ್ಥರಾದ ನೀವು ಹೀಗೆಂದರೆ ಹೇಗೆ? ಈ ಶೇಷಣ್ಣ ಇರೋವರೆಗೂ ನೀವು ಯಾವುದಕ್ಕೂ ಚಿಂತೆ ಮಾಡಬೇಡಿ..ಗೋವಿಂದ ಶೆಟ್ರಹತ್ತಿರ ಮಾತಾಡಿದ್ದೇನೆ ಕೆರೆಕೆಳಗಿನ ಎರಡು ಎಕರೆ ಗದ್ದೆ ಮಾರಿದರಾಯಿತು" ಎಂದು ಸಮಾಧಾನ ಮಾಡಿದ. 'ಮುಂಡೇ ಗಂಡ ಈ ಶೇಷಣ್ಣ ಶ್ಯಾನುಭೋಗದ ಮನೆ ಗುಡಿಸಿ ಗುಂಡಾಂತರ ಮಾಡ್ತಾನೆ' ಎಂದು ಅಗ್ರಹಾರದ ಉಳಿದ ಬ್ರಾಹ್ಮಣ ಕುಟುಂಬಗಳು ಆಡಿಕೊಂಡರೂ, ಶೇಷಣ್ಣ ಯಾರಿಗೂ ಕ್ಯಾರೇ ಎನ್ನಲಿಲ್ಲ.

ಸುತ್ತೂ ಏಳು ಊರುಗಳಿಗೆ ಆಸಾದಿಗಳು ಡಡ್ ಡಣಕ..ಡಕ್ ಡಣಕ ಎಂದು ತಮಟೆ ಬಾರಿಸುತ್ತಾ 'ಕೇಳ್ರಪ್ಪೋ ಕೇಳ್ರಿ ಶ್ಯಾನುಬೋಗರ ಹೊಸಮನೆ ಊಟ ಐತೆ ಮೂರು ದಿನ ಯಾರೂ ಒಲೆ ಅಚ್ಚಾಂಗಿಲ್ಲ..ಸಮಸ್ತರೂ ಬರ್ಬೇಕ ಹೋ...' ಡಡ್‌ಡಣಕ..ಡಡ್‌ಡಣಕ. ಎಂದು ಸಾರಿದರು. ಮೇಲ್‌ ಸ್ಥರದ ಜನರ ಪ್ರತಿ ಮನೆಗೂ ತಳವಾರರು ಹೋಗಿ, ವಿಷಯ ಮುಟ್ಟಿಸಿಬಂದರು. ಮೇಲುಕೋಟೆಯಿಂದ ಪುರೋಹಿತರನ್ನು ಕರೆಸಲಾಯಿತು. ಭೂರಿ ಭೋಜನದ ತಯಾರಿಕೆಗೆ ತಮಿಳು ಸೀಮೆಯಿಂದ ಅಡಿಗೆಯವರನ್ನು ಕರೆಸಲಾಯಿತು. ಹಿಂದೆಂದೂ ಕಂಡರಿಯದ ರೀತಿಯಲ್ಲಿ ಅತ್ಯಂತ ಅದ್ಧೂರಿಯಾಗಿ ಮೂರು ದಿನ ಗೃಹ ಪ್ರವೇಶ ನಡೆಯಿತು. ಗೃಹಪ್ರವೇಶದಲ್ಲಿ ಉಂಡ ಸುತ್ತೇಳೂ ಹಳ್ಳಿಗಳ ಜನ 'ಓಹೋ' ಎಂದು ಮೂಗಿಮೇಲೆ ಬೆರಳಿಟ್ಟು ಬೆರಗಾದರು. ಗೃಹಪ್ರವೇಶದ ಸಕಲ ಪಾರುಪತ್ತೆಯನ್ನು ಸ್ವತ: ಶೇಷಣ್ಣನೇ ನೋಡಿಕೊಂಡ.

ಭೂದಾನ, ಗೋದಾನ, ಕನಕದಾನ, ಬ್ರಾಹ್ಮಣರಿಗೆ ದಕ್ಷಿಣೆ, ಗೃಹ ಪ್ರವೇಶದ ಹೋಮ ಹಮನಾದಿ ಇತ್ಯಾದಿ ಪೂಜಾದಿಗಳಿಗೆ, ಹಾಗೂ ಭೋಜನದ ಬಾಬತ್ತುಗಳಿಗಾಗಿ ಹಣಸಾಕಾಗಲಿಲ್ಲವೆಂದು, ಶ್ಯಾನುಭೋಗ ಕೇಶವಾಚಾರ್ಯರಿಗೆ ಇದ್ದ ಒಂದೂವರೆ ಎಕರೆ ಬಾಳೆ ತೋಟವನ್ನು ಶೇಷಣ್ಣ ಕೆಳಗಿನ ಓಣಿಯ ನಿಂಗೇಗೌಡನ ಪಾಲುಮಾಡಿದ. 'ಬ್ರಾಂಬರ ಸೊತ್ತು ನಾವು ಅರಗಿಸಿಕೊಳ್ಳೊಕಾಗಾಕಿಲ್ಲ ಬುದ್ದೀ' ಎಂದು ಕೆಳಗಿನ ಓಣಿಯ ನಿಂಗೇಗೌಡ ಕುಯ್ಯೋ.. ಮುರ್ರೋ ಎಂದರೂ, ಶೇಷಣ್ಣ ಅವನನ್ನು ಯಾವ ಮಾಯದಲ್ಲಿ ಒಪ್ಪಿಸಿದನೋ ದೇವರೇ ಬಲ್ಲ.

ಗಣ ಹೋಮದ ನಂತರ ಮೂರು ದಿನ ದಂಪತಿಗಳು ಹೊಸ ಮನೆಯಲ್ಲೇ ನಿದ್ರಿಸಬೇಕೆಂಬ ಪುರೋಹಿತರ ಮಾತಿನಂತೆ ಶ್ಯಾನುಬೋಗ ಕೇಶವಾಚಾರ್ಯ ಮತ್ತು ವೆಂಕು ಹೊಸ ಮನೆಯಲ್ಲೇ ಉಳಿದರು. ಕೇಶವಾಚಾರ್ಯರಿಗೆ ಮಂಕು ಕವಿದಂತಾಗಿತ್ತು. ಇದ್ದ ಬದ್ದ ಆಸ್ತಿ ಎಲ್ಲಾ ಹೊಸ ಮನೆಯ ಹೆಸರಿನಲ್ಲಿ ಪರರ ಪಾಲಾಯಿತು. ಮನೆಯಲ್ಲಿ ಚಿಕ್ಕಾಸೂ ಉಳಿಯಲಿಲ್ಲ. ದೊಡ್ಡಸ್ಥಿಕೆಗೆ ಹೋಗಿ ನಗೆಪಾಟಲಿಗೆ ಈಡಾದನಲ್ಲಾ. ಉಪಜೀವನಕ್ಕೆ ಏನುಮಾಡಬೇಕು ಎಂಬ ಯೋಚನೆಯಲ್ಲಿ ಎಷ್ಟು ಹೊರಳಾಡಿದರೂ ನಿದ್ರೆ ಹತ್ತಲೇ ಇಲ್ಲ.

ಸರಿ ರಾತ್ರಿಯಲ್ಲಿ, ಕಣ್ಣು ಎಳಿಯೋ ಹೊತ್ತಿನಲ್ಲಿ, ಯಾರೋ ಕರೆದಂತಾಯಿತು. ಎದ್ದು ನೋಡಿದರೆ ಯಾರೂ ಇಲ್ಲ. ನೀರವ ನಿಶಬ್ಧ..ವೆಂಕುವಿನ ಉಸಿರಾಟದ ಹೊರತಾಗಿ ಉಳಿದೆಲ್ಲವೂ ಮೌನ, ಹುಣಸೇತೋಪಿನಾಚೆಯ ಸ್ಮಶಾನದಿಂದ ನರಿಗಳ ಗುಂಪೊಂದು ಕೆಟ್ಟದಾಗಿ ಊಳಿಡುತ್ತಿದ್ದವು. 'ಅಪಶಕುನ..ಅಪಶಕುನ' ಎಂದುಕೊಂಡ ಕೇಶವಾಚಾರ್ಯ 'ಶ್ರೀಆಂಜನೇಯಂ ಪ್ರಸನ್ನಾಂಜನೇಯಂ..;' ಎಂದು ಹನುಮಶ್ರೋಸ್ತ್ರವನ್ನು ಜಪಿಸುತ್ತಾ ಬಚ್ಚಲು ಮನೆಗೆ ಹೋಗಿ ಬಂದು, ಪುನ: ಮಲಗಲು ಉಪಕ್ರಮಿಸಿದರು. ಇನ್ನೇನು ಮಲಗಬೇಕು ಎನ್ನುವಾಗಲೇ..ಮತ್ತೇ ಯಾರೋ ಕರೆದಂತಾಯಿತು. ಕತ್ತಲೆಯಲ್ಲೇ ಶಬ್ಧಬಂದ ದಿಕ್ಕಿನೆಡೆ ಕಿವಿಯನ್ನು ನಿಮಿರಿಸಿ ಆಲಿಸಲು ಪ್ರಯತ್ನಿಸಿದರು. ಯಾರೋ ಹೆಣ್ಣಿನ ಧ್ವನಿ..'ನನ್ನನ್ನು ಕರೆದುಕೋ' 'ನನ್ನನ್ನು ಕರೆದುಕೋ' ಎಂದು ಅಸ್ಪಷ್ಟವಾಗಿ ಕೇಳುತ್ತಿದೆ. ಶಬ್ಧದ ಮೂಲವನ್ನು ಅರಸುತ್ತಾಹೋದ ಶ್ಯಾನುಭೋಗ ಕೇಶವಾಚಾರ್ಯರಿಗೆ ಅವರ ತಾತನ ಕಾಲದ ಹಳೆಯ ತೊಟ್ಟಿ ಮನೆಯ ಮೂಡಲ ಭಾಗದ ತೇಗದ ಭಾರೀ ತೊಲೆ ಮುರಿದುಬಿದ್ದ ಸ್ಥಳದ ಪಕ್ಕದಲ್ಲಿದ್ದ ದೇವರ ಮನೆಯಿಂದ ಆ ಧ್ವನಿಬರುತ್ತಿತ್ತು. ಕೇಶವಾಚಾರ್ಯರಿಗೆ ಭಯ..ಆಶ್ಚರ್ಯ ಒಮ್ಮೆಲೇ ಆವರಿಸಿದವು. ಗಾಯಿತ್ರಿ ಮಂತ್ರ ಜಪಿಸುತ್ತಾ, ದೇವರ ಮನೆಯ ಕಿರುಬಾಗಿಲನ್ನು ತೆರೆದರು . 'ಕಿರ್ರೋ ' ಎಂದು ಬಾಗಿಲು ಶಬ್ಧಮಾಡುವುದೂ..ದೂರದ ಸ್ಮಶಾನದಿಂದ ನರಿಯೋಂದು ಕೆಟ್ಟದಾಗಿ ಅಳುವ ಧ್ವನಿಯಲ್ಲೂ ಊಳಿಡುವುದೂ..'ನನ್ನನ್ನು ಕರೆದುಕೋ' ಎನ್ನುವ ಹೆಣ್ಣಿನ ಧ್ವನಿ..ಈ ಮೂರೂ ಪ್ರಕ್ರಿಯೆಗಳು ಏಕ ಕಾಲಕ್ಕೆ ನಡೆದು ಕೇಶವಾಚಾರ್ಯರ ಕರ್ಣಪಟಲದ ಮೇಲೆ ಬಿದ್ದು, ಅವರ ಜಂಗಾಬಲವೇ ಅಳಿದಂತಾಯಿತು. ಇಲ್ಲದ ಧೈರ್ಯವನ್ನು ಎದೆಯಲ್ಲಿ ತುಂಬಿಕೊಳ್ಳುತ್ತಾ..ದೇವರ ಮನ ಹೊಕ್ಕರು. ಅಖಂಡವಾಗಿ ಉರಿಯುತ್ತಿದ್ದ ನಂದಾದೀಪದ ಬೆಳಕಿನಲ್ಲಿ ನಗುಮೊಗದ ಚೆನ್ನಕೇಶವನ ಪೀಠದ ಅಡಿಯಿಂದ 'ನನ್ನನ್ನು ಕರೆದುಕೋ' ಎನ್ನುವ ಹೆಣ್ಣಿನ ಧ್ವನಿ ಕೇಳಿಸುತ್ತಿತ್ತು. ದೇವರಿಗೆ ಸಾಷ್ಟಾಂಗ ನಮಸ್ಕರಿಸಿದ ಕೇಶವಾಚಾರ್ಯರು, ಪಂಚ ಲೋಹದ ಚೆನ್ನಕೇಶವನ ವಿಗ್ರಹವನ್ನು ಪೀಠದಿಂದ ಬೇರ್ಪಡಿಸಿ ಪಕ್ಕದಲ್ಲಿಟ್ಟು, ಪೀಠವನ್ನು ಅಲುಗಾಡಿಸಲು ನೋಡಿದರು. ಊಂಹೂಂ ಜಪ್ಪಯ್ಯ ಎಂದರೂ ಒಂದಿನಿತೂ ಪೀಠ ಅಲುಗಾಡಲಿಲ್ಲ 'ನನ್ನನ್ನು ಕರೆದುಕೋ' ಎನ್ನುವ ಹೆಣ್ಣಿನ ಧ್ವನಿಯಂತೂ ಕೇಳಿಸುತ್ತಲೇ ಇತ್ತು.

ಆಗಿದ್ದಾಗಲಿ ಎಂದು ಧೈರ್ಯತಂದುಕೊಂಡು, ಹಾರೆಯನ್ನು ತಂದು..ನಿಧಾನವಾಗಿ ದೇವರ ಪೀಠವನ್ನು ಎಬ್ಬಿಸಿದರು. ಪೀಠದ ಕೆಳಗಿನ ದೃಶ್ಯನೋಡಿ ಕೇಶವಾಚಾರ್ಯ ಒಮ್ಮೆಲೇ ದಿಗ್ಭ್ರಮೆಯಿಂದ ಹೌಹಾರಿ ಬೆಚ್ಚಿಬಿದ್ದರು. ಎರಡು ಚಿಕ್ಕ ಮಡಕೆಯ ತುಂಬಾ ಬಂಗಾರದ ನಾಣ್ಯಗಳಿದ್ದವು! ಒಂದು ನಾಣ್ಯವನ್ನು ತೆಗೆದು ನಂದಾದೀಪದ ಬೆಳಕಿನಲ್ಲಿ ಸೂಕ್ಷ್ಮವಾಗಿ ಪರಿಶೀಲಿಸಲಾಗಿ, ಒಂದುಕಡೆ ಸಿಂಹದ ತಲೆಯಿರುವ ಹಸು, ಮತ್ತೊಂದು ಕಡೆ ಗುರಾಣಿಯ ನಡುವೆ ಎರಡು ಕತ್ತಿಗಳಿರುವ ಉಬ್ಬು ಚಿತ್ರಗಳಿದ್ದವು. ಯಾರ ಕಾಲದ ನಾಣ್ಯಗಳೋ!!, ಸಂಭ್ರಮಾಶ್ಚರ್ಯಗಳಿಂದ ಮನಸ್ಸಿನಲ್ಲಿ ಏನು ಬಗೆದರೋ, ಕೇಶವಾಚಾರ್ಯ ಆ ನಾಣ್ಯವನ್ನು ಕಿಸೆಯಲ್ಲಿ ಹಾಕಿಕೊಂಡು ಪೀಠವನ್ನು ಯಥಾಸ್ಥಾನದಲ್ಲಿಟ್ಟು ಅದರ ಮೇಲೆ ಚೆನ್ನೆಕೇಶವ ಸ್ವಾಮಿಯ ವಿಗ್ರಹವಿಟ್ಟು ನಿಧಾನವಾಗಿ ದೇವರ ಬಾಗಿಲನ್ನು ಹಾಕಿದರು. ಇಷ್ಟೆಲ್ಲಾ ನಡೆದರೂ ನಗುಮೊಗದ ಚೆನ್ನಕೇಶವ ಸ್ವಾಮಿ ನಗುತ್ತಲೇ ಇದ್ದ.

ವಾಮಾಚಾರ ಪೂಜೆ:

ಮಹಡಿ ಮನೆಗೆ ಬಂದು ಮಲಗಿದ ಕೇಶವಾಚಾರ್ಯರಿಗೆ ನಿದ್ದೆ ಹತ್ತಿರ ಸುಳಿಯಲಿಲ್ಲ, ತಾನು ಕಂಡ ನಿಧಿ ನಿಜವಾಗಲೂ ಬಂಗಾರದ ನಾಣ್ಯಗಳೇ ಅಥವಾ ಇನ್ನಾವುದಾದರೂ ಲೋಹದ್ದೇ..ನಿಜವಾಗಲೂ ಬಂಗಾರವಾಗಿದ್ದರೆ ಅದನ್ನು ಹೇಗೆ ಜೀರ್ಣಿಸಿಕೊಳ್ಳುವುದು? ಕಿಸೆಯಲ್ಲಿದ್ದ ಬಂಗಾರದ ನಾಣ್ಯ ಮೂಸೆಯಲ್ಲಿ ಕರಗಿದ ಬಂಗಾರದಂತೆ ಶರೀರವನ್ನು ಸುಡತೊಡಗಿತು. ಕಿಸೆಗೆ ಕೈಹಾಕಿ ನೋಡಿದರು. ಬೆಳಗಿನಜಾವದ ಚಳಿಗೆ ಬಂಗಾರದ ನಾಣ್ಯ ತಣ್ಣಗೆ ತಲೆಯನ್ನು ಕೊರೆಯುತ್ತಿತ್ತು. ಇಂಥಹ ವಿಚಾರಗಳಿಗೆಲ್ಲಾ ಸರಿಯಾದ ವ್ಯಕ್ತಿ ಎಂದರೆ ಶೇಷಣ್ಣನೇ ಸರಿ. ಈ ವಯಸ್ಸಿಗೇ ಅವನು ಬಹಳ ಲೌಕಿಕವನ್ನು ಕಂಡಿದ್ದಾನೆ. ಚಿಕ್ಕ ವಯಸ್ಸಿಗೇ ಮನೆಯಿಂದ ಓಡಿ ಹೋಗಿ, ದೇಶಾದ್ಯಂತ ಅಲೆದಿದ್ದಾನೆ. ಗುರುವನ್ನು ಅರಸುತ್ತಾ ಹಿಮಾಲಯದ ತಪ್ಪಲೆಲ್ಲಾ ತಿರುಗಿದ್ದಾನೆ. ಮಹಾನ್ ಸಿದ್ದರಿಂದ ಯೋಗ, ಜ್ಯೋತಿಷ್ಯ ಶಾಸ್ತ್ರ, ರಸವಿದ್ಯೆ, ವಾಮಾಚಾರ, ಭಾನಾಮತಿ, ಅಘೋರಿಗಳ ಸಹವಾಸ ಹೀಗೆ ಅವನು ಕಲಿಯದ ವಿದ್ಯೆಗಳೇ ಇಲ್ಲ ಎಂದು ಖುದ್ದು ಅವನೇ ಹೇಳಿದ್ದಾನೆ. ಹೌದು ಅವನೇ ಸರಿಯಾದ ವ್ಯಕ್ತಿ. ಇದೇ ಯೋಚನೆಯಲ್ಲಿ ನಿದ್ರೆಗೆ ಜಾರಿದ ಕೇಶವಾಚಾರ್ಯರು ಎದ್ದಾಗ ಸೂರ್ಯ ಎರಡು ಮಾರು ಮೇಲೆದಿದ್ದ.

ಸಂಧ್ಯಾವಂದನೆ ಇತ್ಯಾದಿ ಅಹ್ನಿಕಗಳನ್ನು ಮುಗಿಸಿದವರೇ ಶೇಷಣ್ಣನಿಗೆ ಬುಲಾವೆ ಕಳಿಸಿದರು. "ಏನು ಕೇಶವಮಾವ ಬೆಳಿಗ್ಗೇನೆ ಹೇಳಿಕಳಿಸಿದ್ರಿ?" ಎಂದು ದೇಶಾವರಿನಗೆ ನಗುತ್ತಾ ಬಂದ ಶೇಷಣ್ಣನಿಗೆ ಹೇಗೆ ವಿಷಯವನ್ನು ಪ್ರಾರಂಭಿಸಬೇಕು ಎಂದು ಗೊಂದಲವಾಯಿತು. "ಏನೂ ಇಲ್ಲ ಶೇಷು ಯಾಕೋ ಏನೂ ತೋಚುತ್ತಾಇಲ್ಲ, ಸ್ಪಲ್ಪ ದೇವಸ್ಥಾನದ ಹತ್ತಿರ ಅಡ್ಡಾಡಿ ಬರೋಣ" ಎಂದು ಜೋಡುಮೆಟ್ಟಿ ಹೊರಟರು. ಕೇಶವಾಚಾರ್ಯರು ನನ್ನನ್ನು ಶೇಷು ಎಂದು ಕೇಶವಾಚಾರ್ಯ ಸಂಭೋಧಿಸಿದರೆ ಏನೋ ಮಹತ್ತರವಾದ ವಿಷಯವೇ ಸರಿ ಎಂದು ಹಿಂದಿನ ಅನುಭವಗಳಿಂದ ಅರಿತ ಶೇಷಣ್ಣ ಅವರನ್ನು ಹಿಂಭಾಲಿಸಿದ.

ಚೆನ್ನಕೇಶವ ಸ್ವಾಮಿಯ ಉತ್ಸವಮೂರ್ತಿ ಗುಡಿಯ ಪ್ರಾಂಗಣಕ್ಕೆ ಕಾಲಿಟ್ಟ ಕೇಶವಾಚಾರ್ಯ ಮನೆದೇವರಿಗೆ ಭಕ್ತಿಯಿಂದ ನಮಸ್ಕರಿಸಿ. ದೇವಸ್ಥಾನದ ಪಡುವಣ ದಿಕ್ಕಿನಲ್ಲಿದ್ದ ತಪೋವನದ ಅರಳೀಮರದ ಕೆಳಗಿನ ಕಲ್ಲು ಬೆಂಚಿನ ಮೇಲೆ ಕುಳಿತು ಅಕ್ಕ ಪಕ್ಕ ಯಾರೂ ಇಲ್ಲ ಎಂದು ಖಾತ್ರಿ ಮಾಡಿಕೊಂಡು, "ಶೇಷೂ ನಿನ್ನ ಹತ್ತಿರ ಒಂದು ಮುಖ್ಯವಾದ ವಿಷಯ ಚರ್ಚಿಸಬೇಕಿತ್ತು..ತುಂಬಾನೇ ಸೂಕ್ಷ್ಮವಾದ ವಿಷಯ" ಎಂದರು. ಈ ಮಾತನ್ನು ಕೇಳಿದ ಶೇಷಣ್ಣನಿಗೆ ತನ್ನ ಮತ್ತು ವೆಂಕತ್ತೆಯ ಅನೈತಿಕ ಸಂಬಂಧ ಕೇಶವಾಚಾರ್ಯನಿಗೆ ತಿಳಿದು ಹೋಗಿರಬೇಕು ಎಂದು ಒಮ್ಮೆಲೇ ಭಯದಿಂದ ಭೀತನಾಗಿ ಹೃದಯ ಹೆಪ್ಪುಗಟ್ಟಿದಂತಾಗಿ ಬಾಯಿಂದ ಮಾತೇ ಹೊರಡಲಿಲ್ಲ, ಮುಖ ಕಪ್ಪಿಟ್ಟಿತು.

ಎಳೆ ಎಳೆಯಾಗಿ ರಾತ್ರಿನಡೆದ ನಿಧಿಯ ಘಟನಾವಳಿಯನ್ನು ಕೇಶವಾಚಾರ್ಯ ಬಿಡಿಸಿ ಹೇಳಿದ ಮೇಲೆ ನಿಟ್ಟಿಸುರು ಬಿಟ್ಟ ಶೇಷಣ್ಣನ ತಲೆಯಲ್ಲಿ ಮಿಂಚೊಂದು ಮಿಂಚಿ ಮಾಯವಾಯಿತು. "ಎಲ್ಲಿ ಕೇಶವ ಮಾವ ಆ ನಾಣ್ಯವನ್ನು ಇಲ್ಲಿ ಕೊಡಿ" ಎಂದು ಕೂತಿದ್ದ ಕಲ್ಲು ಬೆಂಚಿಗೆ ಒರೆಕಲ್ಲಿನ ಮೇಲೆ ಉಜ್ಜುವಂತೆ ತಿಕ್ಕಿ, ಸೂಕ್ಷ್ಮವಾಗಿ ಪರೀಕ್ಷಿಸಿ. "ಹೌದು ಇದು ಬಂಗಾರವೇ ಸರಿ, ಆದರೆ ಯಾವುದಕ್ಕೂ ನೀವು ದುಡುಕಬಾರದು..ಸಂಜೆ ಅಕ್ಕಸಾಲಿಗರ ಶ್ರೀಪಾದನ ಹತ್ತಿರ ಒಮ್ಮೆ ಪರೀಕ್ಷಿಸಿ, ಮುಂದಿನ ಕ್ರಮದ ಬಗ್ಗೆ ಯೋಚಿಸೋಣ". "ನೋಡು ಶೇಷು ಈ ವಿಚಾರ ನಮ್ಮಿಬ್ಬರ ಹೊರತಾಗಿ ಮೂರನೇ ಪ್ರಾಣಿಗೆ ಗೊತ್ತಾಗಬಾರದು. ಮೊದಲೇ ಕುಂಪಣಿ ಸರ್ಕಾರ ಪೋಲಿಸರಿಗೇನಾದರೂ ಗೊತ್ತಾದರೆ ಕೈಗೆ ಬಂದ ತುತ್ತು ಬಾಯಿಗಿಲ್ಲದಂತಾಗುತ್ತದೆ."

" ಆ ವಿಚಾರ ನನಗೆ ಬಿಡಿ ಕೇಶವಮಾವ, ಆದರೆ ಈ ತಂತು ನೀವಂದುಕೊಂಡಷ್ಟು ಸುಲಭವಾದುದಲ್ಲ. ಹಿಮಾಲಯದಲ್ಲಿದ್ದಾಗ ನಮ್ಮ ಗುರುಗಳಾದ ಅಭಯಂಕರರು ನಿಧಿಗಳನ್ನು ದಕ್ಕಿಸಿಕೊಳ್ಳುವ ವಾಮಾಚಾರವನ್ನು ಶಾಸ್ತ್ರೋಕ್ತವಾಗಿ ಭೋಧಿಸಿದ್ದಾರೆ. ಸ್ವಲ್ಪ ಹೆಚ್ಚು ಕಮ್ಮಿಯಾಯಿತೋ ರಕ್ತ ಕಾರಿ ಸಾಯುತ್ತಾರೆ..ಅಥವಾ ನಿಧಿಯೇ ನಿಷ್ಕ್ರಿಯೆಯಾಗುತ್ತದೆ, ಹೇಗೂ ಮುಂದಿನ ಮಂಗಳವಾರ ಅಮಾವಾಶ್ಯೆ ಪೂಜೆಗೆ ಪ್ರಶಕ್ತವಾದ ದಿನ, ಸೋಮವಾರ ನಾನು ಪೇಟೆಗೆ ಹೋಗಿ ಪೂಜೆಗೆ ಬೇಕಾದ ವಿಶಿಷ್ಟ ವಸ್ತುಗಳನ್ನು ತಂದು ಸ್ಮಶಾನದ ಹತ್ತಿರ ಬಚ್ಚಿಡುತ್ತೇನೆ. ಈ ಪೂಜೆ ಸಮರ್ಪಕವಾಗಿ ನಡೆಯಬೇಕು. ಇಲ್ಲದಿದ್ದರೇ ನಿಧಿ ಪೂಜೆ ನಡೆಸುವ ನನ್ನ ಪ್ರಾಣಕ್ಕೆ ಸಂಚಕಾರ ಬರುವ ಸಾಧ್ಯತೆಗಳಿವೆ" ಎಂದ ಶೇಷಣ್ಣನ ಮಾತುಗಳನ್ನು ಕೇಶವಾಚಾರ್ಯರು ಅಭಿಮಾನದಿಂದ ಕೇಳಿದರು.

ಮಂಗಳವಾರ ಅಮಾವಾಸ್ಯೆಯ ರಾತ್ರಿ ಹನ್ನೆರಡು ಗಂಟೆಗೆ ನಿಧಿ ಹೊರತೆಗೆಯುವ ತಂತುವಿಗೆ ಮುಹೂರ್ತ ನಿಗದಿಯಾಯಿತು. ಅಂದು ಸಂಜೆಯೇ ಪೂಜೆಗೆ ಬೇಕಾದ ವಿಶಿಷ್ಟ ವಸ್ತುಗಳ ಒಂದು ಮೂಟೆಯನ್ನು ಶೇಷಣ್ಣ ಹಿತ್ತಲಲ್ಲಿ ತಂದಿಟ್ಟ. "ಕೇಶವ ಮಾವ ಇನ್ನೂ ಕೆಲವು ವಸ್ತುಗಳು ಬೇಕಾಗಿವೆ, ರಾತ್ರಿ ಬರುತ್ತೇನೆ ಹಿತ್ತಲ ಬಾಗಿಲು ತೆರೆದಿಟ್ಟಿರಿ" ಎಂದು ಕತ್ತಲಲ್ಲಿ ಮಾಯವಾದ.

ಸರಿ ರಾತ್ರಿಯಲ್ಲಿ ಮತ್ತೊಂದು ಚೀಲದ ಸಹಿತ ಬಂದ ಶೇಷಣ್ಣ "ಕೇಶವ ಮಾವ ನಾನು" ಎಂದು ಪಿಸುಗುಟ್ಟಿದ. ಹಿತ್ತಲ ಬಾಗಿಲನ್ನು ತೆಗೆದ ಕೇಶವಾಚಾರ್ಯರಿಗೆ ಮೂಟೆಯಿಂದ ಕೋಳಿಯ ಶಬ್ಧ ಕೇಳಿಸಿತು. "ಇದೇನೋ ಶೇಷು ಅನಿಷ್ಟ" ಎಂದರು. ಕೇಶವಮಾವ ವಾಮಾಚಾರದಲ್ಲಿ ಯಾವುದೂ ನಿಷಿದ್ಧವಲ್ಲ. ತಂತು ಮುಗಿಯುವವರೆಗೆ ನೀವು ಮಾತಾಡಬಾರದು, ಕೇವಲ ನಾನು ಹೇಳಿದ ಕ್ರಿಯೆಗಳನ್ನಷ್ಟೇ ಮಾಡಬೇಕು" ಎಂದ. ಶ್ಯಾನುಬೋಗರ ಅಂಗಳದಲ್ಲಿ ಮಲಗಿದ್ದ ನಾಯಿ ವಿಚಿತ್ರವಾಗಿ ಬೊಗಳಲು ಪ್ರಾರಂಭಿಸಿತು.

ದೇವರ ಮನೆ ಸೇರಿದ ಶೇಷಣ್ಣ "ಕೇಶವ ಮಾನ ಚೆನ್ನಕೇಶವನ ವಿಗ್ರಹವನ್ನು ಪೀಠದಿಂದ ಬೇರ್ಪಡಿಸಿ ಪಕ್ಕದ ಕೋಣಿಯಲ್ಲಿಡಿ" ಎಂದು ಪೂಜಾ ಸಾಮಗ್ರಿಗಳನ್ನು ದೇವರ ಮನೆಯ ಒಂದು ಮೂಲೆಯಲ್ಲಿಟ್ಟ. ಓಂ..ಭ್ರೀಂ..ಕ್ರೀಂ..ಎಂದು ಪ್ರಾರಂಭಿಸಿದ ಶೇಷಣ್ಣ ಪೀಠದ ಸುತ್ತಲೂ ಮಂಡಲವನ್ನು ರಚಿಸಿದ..ನಾಲ್ಕು ನಿಂಬೆ ಹಣ್ಣುಗಳನ್ನು ಕೊಯ್ದು ಅದಕ್ಕೆ ಕುಂಕುಮ ಸವರಿ ಅಷ್ಟದಿಕ್ಕುಗಳಲ್ಲಿಟ್ಟ. ಚೀಲದಿಂದ ಹೊರತೆಗೆದ ಕಪಾಲವನ್ನು ಪೀಠದ ಮಧ್ಯಭಾಗದಲ್ಲಿಟ್ಟು ಸುಟ್ಟ ನವಿಲುಗರಿಯ ಭಸ್ಮವನ್ನು ಕಪಾಲದ ಮೇಲೆ ಚೆಲ್ಲಿ,ಅಸ್ಪಷ್ಟವಾಗಿ ಮಂತ್ರಗಳನ್ನು ಪಠಿಸತೊಡಗಿದ..ಸಂಸ್ಕೃತವೂ ಅಲ್ಲದ, ಪಾಳಿಯೂ ಅಲ್ಲದ..ಕೊಂಚ ಒರಿಯಾ ಭಾಷೆಗೆ ಹತ್ತಿರದಂತಿದ್ದ ಆ ಮಂತ್ರಗಳ ಅರ್ಥವಾಗದ ಕೇಶವಾಚಾರ್ಯರು ಮೋಡಿಗೊಳಗಾದ ಮೂಕ ಪ್ರೇಕ್ಷಕರಾಗಿದ್ದರು. ದೂರದ ಸ್ಮಶಾನದಿಂದ ನರಿಯೊಂದು ಕೆಟ್ಟದಾಗಿ ಅಳುವ ಧ್ವನಿಯಲ್ಲಿ ಊಳಿಡತೊಡಗಿತು. ಮಡಿಕೆಯಲ್ಲಿದ್ದ ಸುರೆಯನ್ನು ಒಂದೇ ಗುಟುಕಿಗೆ ಹೀರಿದ ಶೇಷಣ್ಣ ಖಾಲಿ ಮಡಿಕೆಯನ್ನು ತಲೆಯ ಮೇಲಿಂದ ಹಿಂಭಾಗಕ್ಕೆ ಎಸೆದು ಒಡೆದ.

ಶ್ಯಾನುಭೋಗರ ಹಿತ್ತಲಿನಲ್ಲಿದ್ದ ಹುಣಸೆ ಮರದಿಂದ ಗೂಬೆಯೊಂದು ವಿಚಿತ್ರವಾಗಿ ಕೂಗಿ,ಶೇಷಣ್ಣನಿಗೆ ಏನೋ ಸೂಚನೆ ಕೊಟ್ಟಿತು. ಇದ್ದಕ್ಕಿದ್ದ ಹಾಗೆ ಶೇಷಣ್ಣ ಭಯಂಕರವಾಗಿ ಕಾಣಿಸತೊಡಗಿದ .. ಅವನ ಬಾಯಿಯಿಂದ ನಾಲಿಗೆ ಹಾವಿನಂತೆ ಹೊರಬಂತು..ಕಣ್ಣೆವೆಗಳನ್ನು ಮುಚ್ಚಿದ ಅವನು ಖೇಚರಿ ಸ್ಥಿತಿಯನ್ನು ತಲುಪಿದ.

ಬಲಿಯ ರಕ್ತವನ್ನು ಕಪಾಲದ ಮೇಲೆ ಚೆಲ್ಲಿ..ಮನಸ್ಸಿನಲ್ಲೇ ಮಂತ್ರಗಳನ್ನು ಪಠಿಸತೊಡಗುತ್ತಾ..ಕೇಶವಾಚಾರ್ಯರಿಗೆ "ದೃಷ್ಟಿ ನನ್ನ ಕಣ್ಣುಗಳಲ್ಲೇ ಕೇಂದ್ರೀಕೃತವಾಗಿರಲಿ ಪೂರ್ವದಲ್ಲಿ ಹೊಂಗಿರಣಗಳು ಮೂಡುವ ಮೊದಲೇ ತಂತುವನ್ನು ಪೂರ್ಣಗೊಳಿಸಬೇಕು. ಹೀಗಾಗದಿದ್ದ ಪಕ್ಷದಲ್ಲಿ ರಕ್ತಕಾರಿ ಸಾಯುವುದು ಖಂಡಿತ ಅಥವಾ ನಿಧಿಯೇ ನಿಷ್ಕ್ರಿಯೆಯಾಗುತ್ತದೆ" ಎಂದು ಎಡಗೈ ಹೆಬ್ಬರಳನ್ನು ಅವರ ಹಣೆಯ ಮಧ್ಯಭಾಗದಲ್ಲಿಯೂ ಮತ್ತು ತೋರುಬೆರಳನ್ನು ಅವರ ನೆತ್ತಿಯ ಮೇಲಿಟ್ಟು ಒಮ್ಮೆ ಜೋರಾಗಿ ಒತ್ತಿ..ಅವರ ತಲೆಗೂದಲಿನ ಮೂರು ಎಳೆಗಳನ್ನು ಮತ್ತು ಎಡಗೈ ಉಂಗುಷ್ಟ ಬೆರಳಿನ ಉಗುರನ್ನು ಕತ್ತರಿಸಿ ಭಸ್ಮ ಮಾಡಿ ಕಪಾಲದ ಮೇಲೆ ಚೆಲ್ಲಿದ.

ಪ್ರೇತಗಳನ್ನು ಆಹ್ವಾನಿಸುತ್ತಾ ಮಂತ್ರಗಳನ್ನು ಪಠಿಸುತ್ತಲೇ ಮತ್ತೊಂದು ಮಡಿಕೆಯಲ್ಲಿದ್ದ ನೀಚವಾಸನೆ ಬರುತ್ತಿದ್ದ ದ್ರವವನ್ನು 'ಹೂಂ ಸ್ವೀಕರಿಸಿ' ಎಂದ, ಅಂಟು ಅಂಟಾಗಿದ್ದ ಆ ದ್ರವ ಕುಡಿದ ಕೇಶವಾಚಾರ್ಯರಿಗೆ ಹೊಟ್ಟೆ ತೊಳೆಸಿದಂತಾ ಯಿತು ..ಅಂಗಾಲಿನಿಂದ ನೆತ್ತಿಯವರೆಗೂ ಏನೋ ಸಂಚರಿಸಿದಂತಾಗಿ ಅವರ ಕಣ್ಣುಗುಡ್ಡೆಗಳು ಊರ್ಧ್ವಮುಖವಾಗಿ ಚಲಿಸಿ ಸುಪ್ತಾವಸ್ಥೆ ತಲುಪಿದರು, ಉಳಿದ ತಂತು ಅವರಿಗೆ ಸ್ವಪ್ನಾವಸ್ಥೆಯಲ್ಲಿ ಗೋಚರಿಸತೊಡಗಿತು.

ಶೇಷಣ್ಣ ಖೇಚರೀ ಅವಸ್ಥೆಯಲ್ಲೇ ಚೀಲದಿಂದ ಹೊರತೆಗೆದ ಖಡ್ಗಮೃಗದ ಬೆನ್ನುಮೂಳೆಯನ್ನು ಮಂತ್ರಗಳನ್ನು ಪಠಿಸುತ್ತಾ ಮಂಡಲಕ್ಕೆ ಮೂರು ಸುತ್ತು ಹಾಕಿ..ನಭೋ ದಿಕ್ಕಿಗೆ ಹಿಡಿದು ಪ್ರೇತಾತ್ಮಗಳನ್ನು ಆಹ್ವಾನಿಸತೊಡಗಿದ. ಇದ್ದಕ್ಕಿದ್ದ ಹಾಗೆ ಕೇಶವಾಪುರದ ಮೇಲೆ ಕಾರ್ಮೋಡಗಳು ಆವರಿಸಿದವು. ಸಣ್ಣಗೆ ಪ್ರಾರಂಭವಾದ ಮಳೆ ಹಿಂದೆಂದೂ ಕಂಡರಿಯದ ಭಯಂಕರವಾದ ಮಿಂಚು ಗುಡುಗುಗಳಿಂದ ಧೋ...ಧೋ...ಸುರಿಯಲಾರಂಭಿಸಿತು.

ಹುಣಿಸೇತೋಪಿನಾಚೆಯ ಸ್ಮಶಾನದಿಂದ ಭೂಮಿ ಆಕಾಶ ಒಂದಾಗಿಸಿದ ಬೃಹತ್ ಸುಂಟರಗಾಳಿ ಕೇಶವಾಪುರದ ಸಕಲವನ್ನೂ ತನ್ನೊಳಗೆ ಸೆಳೆದುಕೊಳ್ಳುತ್ತಾ ಶ್ಯಾನುಬೋಗ ಕೇಶವಾಚಾರ್ಯರ ಮನೆಸುತ್ತಾ ಭಯಂಕರವಾಗಿ ಸುತ್ತತೊಡಗಿತು...!!

ಊರಿನ ಎಲ್ಲಾ ನಾಯಿಗಳು ನೆರೆದು ಭಯಂಕರವಾಗಿ ಬೊಗಳತೊಡಗಿದವು. ತಂತು ಅಂತಿಮ ಘಟ್ಟ ತಲುಪಿದಾಗ ಆಕಾಶದಲ್ಲಿ ಕಣ್ಣು ಕೊರೈಸುವ ಮಿಂಚೊಂದು ಮಿಂಚಿತು. ಕ್ಷುಧ್ರ ಉಲ್ಕೆಯೊಂದು ಸಿಡಿಲಾಗಿ ಮಾರ್ಪಟ್ಟು...ಭೂಮಿಯೇ ಇಬ್ಭಾಗವಾದಂತೆ ಭಯಂಕರ ಶಬ್ಧದೊಂದಿಗೆ ಶಾನುಭೋಗರ ಅಂಗಳದಲ್ಲಿದ್ದ ,ತೆಂಗಿನ ಮರಕ್ಕೆ ಬಡಿದು, ಅದರ ಸುಳಿ 'ಧಗ್‌'ಎಂದು ಬೆಂಕಿಗೆ ಭಸ್ಮವಾಯಿತು. ಸ್ಮಶಾನದಿಂದ ನರಿಗಳ ಗುಂಪು ಕೆಟ್ಟದಾಗಿ ಅಳುವ ಧ್ವನಿಯಲ್ಲಿ ಊಳಿಡತೊಡಗಿದವು.

ಎಲ್ಲಾ ಪ್ರಶಸ್ತವಾಗಿ ನಡೆಯಿತು ಎಂದು ವಿಜಯೋತ್ಸಾಹದಿಂದ ಶೇಷಣ್ಣ " ಕೇಶವ ಮಾವ ನಾವು ಗೆದ್ದೆವು..ಪೀಠವನ್ನು ಕದಲಿಸಿ ನಿಧಿಯನ್ನು ಹೊರ ತೆಗೆಯಿರಿ" ಎಂದ. ನಿಧಾನವಾಗಿ ಪೀಠವನ್ನು ತೆಗೆದು ಪೀಠದಿಂದ ಕೆಳಗಿನ ದೃಶ್ಯನೋಡಿ..ಕೇಶವಾಚಾರ್ಯ ಒಮ್ಮೆಲೆ ದಿಗ್ಬ್ರಮೆಯಿಂದ ಹೌಹಾರಿ ಬೆಚ್ಚಿಬಿದ್ದರು..ಎರಡು ಚಿಕ್ಕ ಮಡಕೆಯ ತುಂಬಾ ಬಂಗಾರದ ನಾಣ್ಯಗಳಿದ್ದ ಜಾಗದಲ್ಲಿ ಇಜ್ಜಲು ತುಂಬಿಕೊಂಡಿತ್ತು. "ಎಲ್ಲೋ ಆಘಾತವಾಯಿತು ಕೇಶವ ಮಾವ" ಎಂದ ಶೇಷಣ್ಣನ ಮಾತುಗಳಿಗೆ ಕೇಶವಾಚಾರ್ಯರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಅವರ ಬಾಯಿಂದ ಅಸ್ಪಷ್ಟ ಶಬ್ದಗಳು ಹೊರಟವು. ಅವರ ಬಾಯಿಗೆ ಪಾರ್ಶವಾಯು ಬಡಿದು..ನಾಲಿಗೆ ಸೇದಿಹೋಗಿತ್ತು.

ಬೆಳಕು ಹರಿಯುವ ಮುನ್ನವೇ ಅಗ್ರಹಾರದ ತುಂಬೆಲ್ಲಾ ಕೇಶವಾಚಾರ್ಯರಿಗೆ ಲಕ್ವಹೊಡೆದ ಸುದ್ದಿ ಹಬ್ಬಿತ್ತು. ಎಲ್ಲರೂ ವಿಚಾರಿಸಲು ಬಂದರು. ಅವರಿಗೆ ತೋಚಿದ ಹಾಗೆ ಸ್ವಾಂತನ ತೋರಿದರು. ಕೆಳಗಿನ ಓಣಿಯ ನಿಂಗೇಗೌಡನಂತೂ ಗೋಳಾಡುತ್ತಾ "ಸ್ವಾಮೇರಾ ನಿಮ್ಮ ಸೊತ್ತು ನಮಗೆ ಬ್ಯಾಡ್ರೀ..ನಮ್ಮನೆ ಉದ್ದಾರ ಆಗಾಕಿಲ್ಲ" ಎಂದು ಒಂದೂವರೆ ಎಕರೆ ಬಾಳೆ ತೋಟದ ಪತ್ರವನ್ನು ಜಗಲಿ ಮೇಲಿಟ್ಟು ಕೈಮುಗಿದ.

ಎದ್ದು ಕಾಣುತ್ತಿದ್ದ ನ್ಯೂನತೆಯೆಂದರೆ ಕೇಶವಾಚಾರ್ಯರ ಪತ್ನಿ ವೆಂಕೂಬಾಯಿ ಮತ್ತು ಶೇಷಣ್ಣನ ಗೈರುಹಾಜರಿ. ಅವರಿಬ್ಬರೂ ಬಂಗಾರದ ನಾಣ್ಯಗಳ ನಿಧಿಯ ಸಹಿತ ಆಗಲೇ ಕೇಶವಾಪುರವನ್ನು ಬಿಟ್ಟು ಎರಡು ಯೋಜನೆ ದಾರಿಯನ್ನು ಸವೆಸಿದ್ದರು.

0-0-0-0-0-0-0-0-0-0

0 Comments:

Post a Comment

<< Home